kannada-translation-studies











ವಿಭಾಗದ ಪರಿಚಯ

೧೯೯೫ ರಲ್ಲಿ ಶಾಸನಶಾಸ್ತ್ರ ವಿಭಾಗವು ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾದ ನಂತರ, ಈ ವಿಭಾಗವು ಕರ್ನಾಟಕದ ಪ್ರತಿ ಗ್ರಾಮಗಳ ಸಮೀಕ್ಷೆಯನ್ನು ನಡೆಸಿ, ಆ ಗ್ರಾಮಗಳಲ್ಲಿ ಕಂಡುಬರುವ ಶಾಸನಗಳ ಸಮೀಕ್ಷೆಯನ್ನು ಮಾಡಿ, ಸಂಗ್ರಹಿಸಿ ಅವುಗಳನ್ನು ಸಂಪಾದಿಸಿ ಸಂಪುಟಗಳಲ್ಲಿ ಪ್ರಕಟಿಸುವ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಜೊತೆಗೆ ವಿಭಾಗವು ಪಿಎಚ್.ಡಿ., ಮತ್ತು ಎಪಿಗ್ರಫಿಯಲ್ಲಿ ಪಿಜಿ ಡಿಪ್ಲೊಮಾ ಬೋಧನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಶಾಸನ ಸಂಪುಟಗಳ ಪ್ರಕಟಣೆಗಳನ್ನು ಹೊರತಂದಿದೆ. ಮತ್ತು ಇತರ ನೆರೆಯ ರಾಜ್ಯಗಳಲ್ಲಿರುವ ಕನ್ನಡ ಶಾಸನಗಳನ್ನು ಸಂಗ್ರಹಿಸಿ ಸಂಪುಟಗಳಲ್ಲಿ ಪ್ರಕಟಿಸಿದೆ. ಇತರ ಉಳಿದ ಜಿಲ್ಲೆಗಳ ಶಾಸನಗಳ ಸಂಪುಟಗಳನ್ನು ಹೊರತರುವಲ್ಲಿ ಸಕ್ರಿಯವಾಗಿದೆ. ವಿಭಾಗವು ಶಾಸನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿದೆ. ಶಾಸನ ಹಾಗೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧೆಡೆ ವಿಶೇಷ ಉಪನ್ಯಾಸ ಮಾಲಿಕೆಗಳನ್ನೂ ನಡೆಸುತ್ತಿದೆ.

ದೂರದೃಷ್ಟಿ
➣ ಕನ್ನಡ/ಕರ್ನಾಟಕವನ್ನು ಅರಿತುಕೊಳ್ಳಲು ಎಲ್ಲ ಶಾಸನಗಳ ಭಂಡಾರದ ಅವಶ್ಯಕತೆಯನ್ನು ಪೂರೈಸುವುದು.
➣ ಶಾಸನಗಳ ಭಾಷೆ ಮತ್ತು ಲಿಪಿಗಳನ್ನು ಓದುವ ಕೌಶಲ್ಯವನ್ನು ಕಲಿಸುವುದು.
➣ ಶಾಸನೋಕ್ತ ಇತಿಹಾಸಶಾಸ್ತ್ರವನ್ನು ವಸ್ತುನಿಷ್ಠವಾಗಿ ರಚಿಸುವುದು.
➣ ಶಾಸನಗಳಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ರಚಿಸುವುದು.

ಧ್ಯೇಯೋದ್ದೇಶಗಳು
➣ ಜಿಲ್ಲಾವಾರು ಶಾಸನಗಳನ್ನು ಮತ್ತು ನೆರೆಹೊರೆ ರಾಜ್ಯಗಳಲ್ಲಿರುವ ಕನ್ನಡ ಶಾಸನಗಳನ್ನು ಪ್ರಕಟಿಸುವ ಮೂಲಕ ಅವುಗಳನ್ನು ಸಂಪುಟಗಳ
ರೂಪದಲ್ಲಿ ಹೊರತರುವುದು.
➣ ಕರ್ನಾಟಕ ಮತ್ತು ಇತರ ಸ್ಥಳಗಳಲ್ಲಿರುವ ಶಾಸನಗಳ ಕುರಿತು ಕಲಿಸುವುದಲ್ಲದೇ, ಅವುಗಳನ್ನು ರಕ್ಷಿಸುವ, ಓದುವ ಮತ್ತು ವಿಶ್ಲೇಷಿಸುವ
ತರಬೇತಿಯನ್ನು ನೀಡುವುದು.
➣ ಶಾಸನಗಳನ್ನು ಮಾಹಿತಿ ಮೂಲಗಳನ್ನಾಗಿ ಬಳಸಿ, ಇತಿಹಾಸವನ್ನು ರಚಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದು.
➣ ತ್ವರಿತವಾಗಿ ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ತಂತ್ರಾಂಶ ರೂಪಗಳಿಗೆ ಶಾಸನಗಳನ್ನು ಒಳಪಡಿಸುವುದು.

ವಿಭಾಗದ ಅನನ್ಯತೆ
ಉತ್ತರ ಕರ್ನಾಟಕದ ಹಳ್ಳಿಗಳಲಿದ್ದ ಆರರಿಂದ ಎಂಟು ಸಾವಿರ ಶಾಸನಗಳನ್ನು ಶಾಸನಶಾಸ್ತ್ರ ವಿಭಾಗವು ಪ್ರಕಟಿಸಿರುತ್ತದೆ. ಈಗಾಗಲೆ ವಿಭಾಗವು ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಶಾಸನಗಳನ್ನು ಪ್ರಕಟಿಸಿದೆ ಹಾಗೂ ವಿಶೇ?ವಾಗಿ ಹಂಪಿ ಕುರಿತು ಸಂಪುಟವನ್ನು ಹೊರತಂದಿದೆ. ಅಲ್ಲದೆ ಆಂಧ್ರಪ್ರದೇಶ, ತಮಿಳನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿಯ ಕನ್ನಡ ಶಾಸನಗಳನ್ನೂ ಪ್ರಕಟಿಸಿದೆ. ಜೊತೆಗೆ ಗದಗ, ಧಾರವಾಡ, ಉಡುಪಿ, ಯಾದಗಿರಿ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳ ಶಾಸನ ಸಂಪುಟಗಳು ಪ್ರಗತಿಯ ಹಂತದಲ್ಲಿವೆ.

ವಿಭಾಗದ ಒಳ್ಳೆಯ ಅಭ್ಯಾಸಗಳು
ಗ್ರಾಮಗಳಲ್ಲಿಯ ಶಾಸನಗಳನ್ನು ಶೋಧಿಸುವುದು.
ಶಾಸನ ಸಂಪುಟಗಳನ್ನು ಪ್ರಕಟಿಸುವುದು.
ಹಳೆ ಶಾಸನಗಳನ್ನು ಸಂರಕ್ಷಿಸುವ ಮತ್ತು ಓದುವ ಕಲೆಯನ್ನು ಹೊಸ ತಲೆಮಾರಿನ ಸಂಶೋಧಕರಿಗೆ ಕಲಿಸುವುದು.

ವಿಭಾಗದ ಭವಿಷ್ಯದ ಯೋಜನೆಗಳು
ಇಂಗ್ಲಿಷ್ ಮತ್ತು ಆಧುನಿಕ ಕನ್ನಡದಲ್ಲಿ ಶಾಸನಗಳ ಅನುವಾದವನ್ನು ಆನ್‌ಲೈನ್ ತಂತ್ರಾಂಶ ರೂಪದಲ್ಲಿ ಸಿದ್ದಪಡಿಸುವುದು.
ಸಂಶೋಧನೆಗೆ ಲಭ್ಯವಾಗದ ಕರ್ನಾಟಕ ಶಾಸನಗಳನ್ನು ಗುರುತಿಸುವುದು ಹಾಗೂ ಅಪೂರ್ಣವಿರುವ ಶಾಸನ ಸಂಪುಟಗಳನ್ನು ಪೂರ್ಣ ಮಾಡುವುದು.