ಕನ್ನಡ ವಿಶ್ವವಿದ್ಯಾಲಯದ ಉದ್ದೇಶಗಳು
- ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಧರಿಸಿ ಬೆಳೆದ ಕಲೆ, ಸಂಸ್ಕೃತಿ, ಸಂಗೀತ, ರಂಗನಾಟಕಗಳು, ಜಾನಪದ ಕಲೆ, ವರ್ಣಚಿತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳಶಾಸ್ತ್ರ, ಮಣ್ಣಿನ ವಿಜ್ಞಾನ, ಖಗೋಳಶಾಸ್ತ್ರ, ನೌಕಾಗತಿ ಮತ್ತು ನೌಕಾಶಾಸ್ತ್ರ, ಜೋತಿಷ್ಯಶಾಸ್ತ್ರ, ಸಿದ್ಧವೈದ್ಯ, ಇಂಜಿನಿಯರಿಂಗ್ ವಿಜ್ಞಾನ ಮತ್ತು ಕರಕುಶಲತೆಯಂಥ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅನುಕೂಲ ಕಲ್ಪಿಸುವುದು ಮತ್ತು ಕ್ರಮಬದ್ಧಗೊಳಿಸುವುದು.
- ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಿಗರ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳಿಗಾಗಿ ಶೋಧನೆ ನಡೆಸುವುದು ಮತ್ತು ಅವುಗಳನ್ನು ಸಂಗ್ರಹಿಸುವುದು ಮತ್ತು ಅದರ ಸಂಶೋಧನೆಯ ಆಧಾರದ ಮೇಲಣ ನಿರ್ಣಯಗಳೊಂದಿಗೆ ಅವುಗಳನ್ನು ಪ್ರಕಟಿಸುವುದು.
- ಅಭಿವೃದ್ಧಿಶೀಲ ವಿಶ್ವದಲ್ಲಿರುವ ಎಲ್ಲ ಶೈಕ್ಷಣಿಕ ಕ್ಷೇತ್ರಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿರುವ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಂಶೋಧನೆಗೆ ಏರ್ಪಾಡು ಮಾಡುವುದು ಮತ್ತು ಆ ಬಗ್ಗೆ ಕಾರ್ಯವಿಧಾನವನ್ನು ನಿರ್ಧರಿಸುವುದು ಮತ್ತು ಅದಕ್ಕಾಗಿ ಸೂಕ್ತ ಮಾರ್ಗವನ್ನು ಕಂಡುಕೊಳ್ಳುವುದು.
- ಕಲೆ, ವಾಸ್ತುಶಿಲ್ಪ, ಶಿಲ್ಪಕಲೆ, ವರ್ಣಚಿತ್ರ, ಪ್ರತಿಮಾಶಾಸ್ತ್ರ, ಶಾಸನಶಾಸ್ತ್ರ, ರಂಗಭೂಮಿ, ನೃತ್ಯ, ಸಂಗೀತ, ಗುಡ್ಡಗಾಡಿನವರ ಕಲೆ, ಧರ್ಮ, ತತ್ವಜ್ಞಾನ, ಸಾಮಾಜಿಕ ಆಂದೋಲನ ಮುಂತಾದವುಗಳ ಮೂಲಕ ವ್ಯಕ್ತವಾಗಿರುವ ಕನ್ನಡ ಸಂಸ್ಕೃತಿಯನ್ನು ಸಂಯೋಜಿಸುವುದು. ಸಾಂಪ್ರದಾಯಿಕ ಬುಡಕಟ್ಟು, ಜಾನಪದ ಕಲೆ ಮತ್ತು ಪ್ರಸಕ್ತ ಕಲೆಗಳನ್ನು ದಾಖಲಿಡುವುದು, ಸಂರಕ್ಷಿಸುವುದು, ವಿಶ್ಲೇಷಿಸುವುದು ಮತ್ತು ಪ್ರಕಟಿಸುವುದು.
- ನಿಯಮಾನುಸಾರ ಷರತ್ತುಗಳ ಮೇರೆಗೆ ಸಂಶೋಧನೆ ನಡೆಸುವ ಕೇಂದ್ರಗಳಿಗೆ ಮಾನ್ಯತೆ ನೀಡುವುದು ಮತ್ತು ಪದವಿ, ಡಿಪ್ಲೊಮ ಮತ್ತು ಉನ್ನತ ಸಂಶೋಧನಾ ಪದವಿಗಳನ್ನು ಪ್ರಾರಂಭಿಸುವುದು.
- ಗ್ರಂಥಾಲಯಗಳು, ಪ್ರಸಾರಾಂಗ, ಮಾಹಿತಿಕೇಂದ್ರ, ಸಂಗ್ರಹಾಲಯಗಳು, ಸಂಶೋಧನಾ ಸಂಸ್ಥೆಗಳನ್ನು ಪ್ರಾರಂಭಿಸುವುದು ಮತ್ತು ವಿಶ್ವವಿದ್ಯಾಲಯದಿಂದ ಸ್ಥಾಪಿತವಾದ ಅಥವಾ ನಿರ್ವಹಿಸಲಾದ ಇತರ ಸಂಶೋಧನಾ ಸಂಸ್ಥೆಗಳನ್ನು ಪ್ರಾರಂಭಿಸಿ ನಿರ್ವಹಿಸುವುದು.