ನುಡಿಹಬ್ಬ ೨೫ – ೨೧ನೇ ಏಪ್ರಿಲ್ ೨೦೧೫
೦೧. ಡಾ. ಬಿ.ಟಿ.ರುದ್ರೇಶ್ ಅವರು
ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ತಿಪ್ಪೇಸ್ವಾಮಿ ದಂಪತಿಗಳಲ್ಲಿ ೨೮-೦೩-೧೯೫೬ ರಲ್ಲಿ ಜನಿಸಿದ ಶ್ರೀ ರುದ್ರೇಶ್ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿದರು. ಬೆಂಗಳೂರಿನ ಹಾನಿಮನ್ ಹೋಮಿಯೋಪತಿ ಮೇಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಮುಂಬಯಿನ ಆಸ್ಪತ್ರೆಯೊಂದರಲ್ಲಿ ಚೀಫ್ ಮೆಡಿಕಲ್ ಆಫಿಸರ್ ಆಗಿ ಸೇವೆಯನ್ನು ಆರಂಭಿಸಿದರು. ಆನಂತರ ಬೆಂಗಳೂರಿನ ಅಶ್ವಿನಿ ಹೋಮಿಯೊಪತಿ ಕ್ಲಿನಿಕ್‌ನಲ್ಲಿ ಡಾ.ಎ.ವಿ.ಕೃಷ್ಣಮೂರ್ತಿ ಅವರ ಬಳಿ ಸಹಾಯಕರಾಗಿ ಸೇವೆಗೆ ಸೇರಿದರು. ಅಲ್ಲಿಂದ ಇಲ್ಲಿಯವರೆಗೆ ಅಶ್ವಿನಿ ಹೋಮಿಯೊಪತಿ ಕ್ಲಿನಿಕ್‌ನಲ್ಲಿ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವೈದ್ಯಕೀಯ ಕ್ಷೇತ್ರದಲ್ಲಿ ನೆಲೆಯೂರಲು ಕಾಯಿಲೆಗೆ ಔಷಧಿಯಲ್ಲ ರೋಗಿಗೆ ಔಷಧಿ ನೀಡಿದಾಗ ಮಾತ್ರ ಎಲ್ಲವೂ ಸರಿಯಾಗುತ್ತದೆ ಎನ್ನುವ ಮಾತು ಹೆಚ್ಚು ಇಂಪ್ರೆಸ್ ಮಾಡಿತು ಎನ್ನುತ್ತಾರೆ ಶ್ರೀ ಬಿ.ಟಿ.ರುದ್ರೇಶ್ ಅವರು. ಡಾ.ರುದ್ರೇಶ್ ಅವರದ್ದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ತಮ್ಮ ನಿರಂತರ ಕೆಲಸದ ನಡುವೆಯೂ ಅವರು ಓದುವ ಮತ್ತು ಬರೆಯುವ ಕೃಷಿಯನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ವೈದ್ಯರಾದವರು ೩೬೦ ಡಿಗ್ರಿ ದೃಷ್ಟಿಕೋನ ಹೊಂದಿರಬೇಕು ಮತ್ತು ಅವರು ಸದಾ ಜಾಗೃತರಾಗಿದ್ದರೆ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಫಲಿತಾಂಶ ನೀಡಲು ಸಾಧ್ಯ ಎನ್ನವುದು ಅವರ ಭಾವನೆ.
ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಹೆಸರು ಬಿ.ಟಿ.ರುದ್ರೇಶ್ ಅವರದ್ದು. ಸಂತಾನಹೀನತೆ ಮತ್ತು ಅದಕ್ಕೆ ಪರಿಹಾರ ಕುರಿತಂತೆ ಪ್ರಶ್ನೆ ಬಂದಾಗ ಮೊದಲು ಚರ್ಚೆಗೆ ಬರುವ ಹೆಸರು ಶ್ರೀ ಬಿ.ಟಿ.ರುದ್ರೇಶ್ ಅವರದ್ದು. ದಿನಕ್ಕೆ ೨೦೦ ರಿಂದ ೩೦೦ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ. ಬಿ.ಟಿ.ರುದ್ರೇಶ್ ಅವರು ಇದುವರೆಗೆ ಸುಮಾರು ೧೫ ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿರುವುದು ದಾಖಲೆಯೇ ಸರಿ. ಜೊತೆಗೆ ಸುಮಾರು ೨೦೦೦ ಕ್ಕೂ ಹೆಚ್ಚಿನ ಸಂತಾನ ಹೀನತೆಯಿಂದ ಬಳಲುತ್ತಿರುವ ದಂಪತಿಗಳಿಗೆ ಚಿಕಿತ್ಸೆಯ ಮೂಲಕ ಮಡಿಲು ತುಂಬುವಂತೆ ಮಾಡಿದ ಏಕೈಕ ವೈದ್ಯರು ಎಂದರೂ ತಪ್ಪಾಗಲಾರದು.
ಅಲೋಪತಿ ವೈದ್ಯಕೀಯ ಪದ್ಧತಿ ಇಂದು ಅತ್ಯಂತ ದುಬಾರಿ ಸೇವೆಯಾಗಿದೆ. ಹಾಗಾಗಿ ಜನಸಾಮಾನ್ಯರು ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಈ ಪದ್ಧತಿಯಿಂದ ಪರಿಹಾರ ಸಿಗದ ಅನೇಕರು ಇತರೆ ವೈದ್ಯಕೀಯ ಪದ್ಧತಿಗಳಿಗೆ ಮೊರೆಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪರ‍್ಯಾಯ ಹಲವು ವೈದ್ಯಕೀಯ ಪದ್ಧತಿಗಳು ಮುಂಚೂಣಿಗೆ ಬರುತ್ತಿವೆ. ಅಂಥವುಗಳಲ್ಲಿ ಹೊಮಿಯೋಪತಿ ಕೂಡ ಒಂದು. ಅತ್ಯಂತ ನಿಧಾನ ಪರಿಹಾರ ಸಿಗುವ ವೈದ್ಯಕೀಯ ಪದ್ಧತಿ ಎಂದು ಅನೇಕರಿಂದ ತಿರಸ್ಕಾರಕ್ಕೆ ಒಳಪಟ್ಟ ಹೋಮಿಯೋಪತಿ ವೈದ್ಯಕೀಯ ಪದ್ಧತಿ ಇಂದು ಮತ್ತೆ ಅನೇಕ ಕಾರಣಗಳಿಗಾಗಿ ಮುಂಚೂಣಿಗೆ ಬರುತ್ತಿದೆ. ಸರಳ ಸಮಸ್ಯೆಯಿಂದ ಕ್ಯಾನ್ಸರ್‌ನಂಥ ರೋಗದವರೆಗೆ ಇದೇ ಪದ್ಧತಿ ಸೂಕ್ತ ಎನ್ನುವುದು ಡಾ. ರುದ್ರೇಶ್ ಅವರ ಭಾವನೆ.
ಡಾ.ಬಿ.ಟಿ.ರುದ್ರೇಶ್ ಅವರ ಬಗ್ಗೆ ಹೇಳಲು ಹೊರಟಷ್ಟು ಮುಗಿಯದ ಕಾವ್ಯದಂತೆ ಅವರ ಬದುಕು. ಬದುಕಿನ ಬಗ್ಗೆಯ ಸ್ವಾರಸ್ಯಗಳನ್ನು ರೋಗಿಯೊಂದಿಗೆ ಹಂಚಿಕೊಳ್ಳುತ್ತ ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಬಳೆಸಿಕೊಳ್ಳುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡುವ ಮೂಲಕ ರೋಗಿಯ ಅರ್ಧ ಕಾಯಿಲಿ ದೂರ ಮಾಡುವ ಸ್ಪರ್ಶಮಣಿಯಂಥ ಅವರ ಈ ವಿಧಾನವೇ ಒಂದು ವಿಶೇಷ. ಆದ್ದರಿಂದಲೇ ಡಾ.ಬಿ.ಟಿ. ರುದ್ರೇಶ್ ಅವರನ್ನು ಅಪರೂಪದ ವೈದ್ಯ ಎಂತಲೂ ಹೊಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಹಾನಿಮನ್ ಎಂತಲೂ ಹೆಸರು ಪಡೆದಿದ್ದಾರೆ.
ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಡಾ,ಬಿ.ಟಿ.ರುದ್ರೇಶ್ ಅವರು ಹೊಮಿಯೋಪತಿ ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಅಸ್ತತ್ವ ತಂದುಕೊಡುವ ಮೂಲಕ ಅಸಾಮಾನ್ಯವಾದ ಸಾಧನೆಯನ್ನು ಮಾಡಿದ್ದಾರೆ. ಸಣ್ಣ ಪ್ರಮಾಣದ ಶೀತ, ನೆಗಡಿಯಂಥ ಕಾಯಿಲೆಯಿಂದ ಹಿಡಿದು ಸಕ್ಕರೆ ಕಾಯಿಲೆ, ಅಲರ್ಜಿ, ಅಸ್ಥಮಾ, ಹೃದ್ರೋಗ, ಸಂತಾನಹೀನತೆ, ಕ್ಯಾನ್ಸರ್‌ನವರೆಗಿನ ಎಲ್ಲ ಕಾಯಿಲೆಗಳನ್ನು ಹೊಮಿಯೋಪತಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಅವರು ಪ್ರ್ಯಾಕ್ಟೀಸ್ ಮಾಡುತ್ತಿರುವ ಅಶ್ವಿನಿ ಹೊಮಿಯೋಪತಿ ಕ್ಲಿನಿಕ್‌ನಲ್ಲಿ ಅವರ ಸಮಯ ಕಾದಿರಿಸಲು ಒಂದರಿಂದ ಎರಡು ತಿಂಗಳು ಮುಂಚೆಯೇ ನೋಂದಣಿ ಮಾಡಬೇಕಾದ ಪರಿಸ್ಥಿತಿ ಇದೆ. ಇದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ.
ಉತ್ತಮ ವಾಕ್ಪಟುವೂ ಆಗಿರುವ ಡಾ.ಬಿ.ಟಿ.ರುದ್ರೇಶ್ ಅವರು ಪ್ರಭಾವಿ ಸಂವಾದಕರು, ಆಪ್ತ ಅಂಕಣಕಾರರೂ ಆಗಿರುವುದರೊಂದಿಗೆ ಅತ್ಯುತ್ತಮ ಶೈಲಿಯ ವೈದ್ಯ ಲೇಖಕರೂ ಆಗಿದ್ದಾರೆ. ಅಷ್ಟೇ ಅಲ್ಲ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಾಕ್ಷಾಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಸ್ವತ: ರುದ್ರೇಶ್ ಅವರೇ ಕಿರುತೆರೆಯಲ್ಲಿ ನಟಿಸಿಯೂ ಸೈ ಎನಿಸಿಕೊಂಡಿದ್ದಾರೆ. ನೇರ ನಡೆ ನುಡಿಗೆ ಹೆಸರಾದ ಡಾ.ಬಿ.ಟಿ.ರುದ್ರೇಶ್ ಅವರು ಬಹುಮುಖ ಪ್ರತಿಭೆಯ ವಾಮನಮೂರ್ತಿ ಎನ್ನಬಹುದು.
ತಮ್ಮ ಬಿಡುವಿಲ್ಲದ ವೈದ್ಯಕೀಯ ಸೇವೆಯ ನಡುವೆ ’ನೋವು ನೀಗುವ ಕಾಯಕದಲ್ಲಿ ಕಂಡ ಬದುಕು-ಬೆಳಕು-೨೦೦೬, ಹೊಮಿಯೋಪತಿ ದ ಹೀಲಿಂಗ್ ಟಚ್ -೨೦೦೯, ವೈದ್ಯನ ಹತ್ತು ಮುಖಗಳು-೨೦೧೧, ಬಡವರ ಬಾದಾಮಿ -ಹೋಮಿಯೊಪತಿ-೨೦೧೧ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧಗಳನ್ನು ಮಂಡಿಸಿ ಮನ್ನಣೆ ಪಡೆದಿದ್ದಾರೆ. ಬೆಂಗಳೂರಿನ ಸರ್ಕಾರಿ ಹೊಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ಸುಮಾರು ಆರು ವರ್ಷಗಳ ಕಾಲ ಅಧ್ಯಾಪಕರಾಗಿ, ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ತಜ್ಞ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ವಿಶ್ವವಿದ್ಯಾಲಯಗಳ ಪರೀಕ್ಷಕರಾಗಿ, ಅಧ್ಯಯನ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕ ರಾಜ್ಯದ ಹೊಮಿಯೋಪತಿಕ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಅವರ ಈ ಎಲ್ಲ ಸಾಧನೆಯನ್ನು ಪರಿಗಣಿಸಿ ಡಾ.ಬಿ.ಟಿ ರುದ್ರೇಶ್ ಅವರಿಗೆ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕುವೆಂಪು ವಿಶ್ವವಿದ್ಯಾಲಯದಿಂದ ೨೦೧೩ ರಲ್ಲಿ ಗೌರವ ಡಾಕ್ಟರೇಟ್, ರಾಜೀವ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಿಂದ ೨೦೧೧ ರಲ್ಲಿ ಎಮಿನೆಂಟ್ ಟೀಚರ್ ಪ್ರಶಸ್ತಿ, ೧೯೯೬ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಹಾನಿಮನ್ ಬಂಗಾರದ ಪದಕ, ೧೯೯೯ ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ೧೯೯೪ರಲ್ಲಿ ಮಧ್ಯಪ್ರದೇಶದಿಂದ ಸಾಹಿತ್ಯ ಶ್ರೀ ರಾಷ್ಟ್ರೀಯ ಪ್ರಶಸ್ತಿ, ೨೦೦೧ರಲ್ಲಿ ಮಲೆನಾಡ ರತ್ನ ಪ್ರಶಸ್ತಿ, ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ವೈದ್ಯರತ್ನ, ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಬಂದಿರುವುದು ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ.
ಹೀಗೆ ವೈದ್ಯಕೀಯ ಕ್ಷೇತ್ರ ಮತ್ತು ಕನ್ನಡ ನಾಡು ನುಡಿ ಸಂಸ್ಕೃತಿಗೆ ಕಾಣಿಕೆ ಸಲ್ಲಿಸಿದ ಡಾ.ಬಿ.ಟಿ.ರುದ್ರೇಶ್ ಅವರ ಬಹುಮುಖ ಪ್ರತಿಭೆಗೆ ಕನ್ನಡ ವಿಶ್ವವಿದ್ಯಾಲಯವು ತನ್ನ ಇಪ್ಪತ್ತೈದನೆಯ ನುಡಿಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದೆ.