ಕನ್ನಡ ವಿಶ್ವವಿದ್ಯಾಲಯದ ಸ್ಥಾಪನಾ ಉದ್ದೇಶ ಹಾಗೂ ಆಶಯಕ್ಕೆ ಪೂರಕವಾಗುವಂತೆ ವಿಶ್ವವಿದ್ಯಾಲಯದ ಬೌದ್ಧಿಕಕೇಂದ್ರವಾಗಿ 1992ರಲ್ಲಿ `ಅಕ್ಷರ’ ಗ್ರಂಥಾಲಯವು ಸ್ಥಾಪನೆಗೊಂಡಿತು. ಅಪರೂಪದ ಅಮೂಲ್ಯ ಗ್ರಂಥಗಳು ಹಾಗೂ ಸಂಶೋಧನಾ ಮಾಹಿತಿಗಳ ಕ್ರೋಡೀಕರಣದೊಂದಿಗೆ ಬೆಳೆಯತೊಡಗಿದ ಈ ಸಂಶೋಧನಾ ಗ್ರಂಥಾಲಯವು, 1995ರಲ್ಲಿ `ವಿದ್ಯಾರಣ್ಯ’ ಆವರಣದ ಮುಕುಟ ಮಣಿಯಂತಿರುವ ಸುಂದರ ಹಾಗು ಸುಸಜ್ಜಿತವಾದ `ಅಕ್ಷರ’ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕನ್ನಡ ನಾಡು-ನುಡಿ-ಕಲೆ-ಸಂಸ್ಕೃತಿಗೆ ಸಂಬಂಧಿಸಿದಂತೆ ಜಗತ್ತಿನೆಲ್ಲೆಡೆಯಿಂದ ಸಂಶೋಧನಾಸಕ್ತರು ಬಂದಲ್ಲಿ, ಅವರಿಗೆ ಈ ಕುರಿತಂತೆ ಸಮಸ್ತ ಮಾಹಿತಿಗಳು ಲಭ್ಯವಾಗುವಂತೆ `ಅಕ್ಷರ’ ಗ್ರಂಥಾಲಯದಲ್ಲಿ `ಸಿರಿಗನ್ನಡವೆಂಬ’ ಪರಾಮರ್ಶನ ವಿಭಾಗವನ್ನು 2004ರಲ್ಲಿ ಆರಂಭಿಸಲಾಯಿತು.
ಇದೀಗ `ಅಕ್ಷರ’ ಗ್ರಂಥಾಲಯದಲ್ಲಿ 2,29,10,748/-ರೂ. ಮೌಲ್ಯದ 1,32,062 ಪುಸ್ತಕಗಳು (ಇದರಲ್ಲಿ 13,125 ಇಂಗ್ಲೀಷ್ ಶೀರ್ಷಿಕೆಗಳು) ಲಭ್ಯವಿದ್ಧು, `ಸಿರಿಗನ್ನಡ’ ಪರಾಮರ್ಶನ ವಿಭಾಗದಲ್ಲಿ ಪ್ರತ್ಯೇಕವಾಗಿ ಸುಮಾರು 63 ಲಕ್ಷ ಮೌಲ್ಯದ, 70,000 ಕನ್ನಡದ ಅಪರೂಪದ ಗ್ರಂಥಗಳಿವೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾದ ಎಲ್ಲ ಸಂಶೋಧನಾ ಮಹಾಪ್ರಬಂಧ/ನಿಬಂಧಗಳು ಸಂಶೋಧನಾಸಕ್ತರ ಓದಿಗೆ ಹಾಗೂ ಪರಾಮರ್ಶೆಗೆ ತಕ್ಷಣವೇ ಒದಗಬೇಕೆಂಬ ಆಶಯದಿಂದ `ಸಿರಿಗನ್ನಡ’ ಪರಾಮರ್ಶನ ವಿಭಾಗದಲ್ಲಿ ಈ ಎಲ್ಲ ಮಹಾಪ್ರಬಂಧಗಳನ್ನು ವ್ಯವಸ್ಥಿತವಾಗಿ ಒಂದೆಡೆ ಸಂಗ್ರಹಿಸಿಡಲಾಗಿದೆ. ಪ್ರಸ್ತುತ ಇವುಗಳ ಡಿಜಿಟಲೀಕರಣ ಪ್ರಕ್ರಿಯೆಯೂ ಮುಂದುವರಿದಿದೆ.
`ಸಂಶೋಧನಾ ಕರ್ನಾಟಕ’ ವೆಂಬ ದತ್ತಕಣಜ:
`ಅಕ್ಷರ’ ಗ್ರಂಥಾಲಯವು ಕನ್ನಡ–ಕರ್ನಾಟಕ–ಕನ್ನಡತ್ವಕ್ಕೆ ಸಂಬಂಧಿಸಿದಂತೆ ಸಂಶೋಧನಾ ಮಾಹಿತಿ ಕೋರಿ ಬರುವ ಓದುಗರಿಗಾಗಿ ಸಂಶೋಧನಾ ಮಾಹಿತಿಗಳುಳ್ಳ `ಸಂಶೋಧನಾ ಕರ್ನಾಟಕ’ ವೆಂಬ ದತ್ತಕಣಜವೊಂದನ್ನು (Database) ಸೃಷ್ಟಿಸಿದೆ. ರಾಜ್ಯ-ಹೊರರಾಜ್ಯ-ವಿದೇಶದ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕನ್ನಡದ ನೆಲ-ಜಲ-ನಡೆ-ನುಡಿ-ಇತಿಹಾಸ-ಸಂಸ್ಕೃ-ಆರ್ಥಿಕತೆ, ಕುರಿತಂತೆ ಇದುವರೆಗೆ ವಿವಿಧ ಜ್ಞಾನಶಿಸ್ತುಗಳಲ್ಲಿ ನಡೆದಿರುವ ಸಂಶೋಧನೆಗಳ (ಡಿ.ಲಿಟ್, ಪಿಎಚ್.ಡಿ, ಎಂ.ಫಿಲ್ bibliographic ವಿವರಗಳ ಜೊತೆಗೆ, ಅವುಗಳ ಸಾರಾಂಶಗಳನ್ನು ಈ ದತ್ತಕಣಜದ ಮೂಲಕ ಪಡೆಯಬಹುದಾಗಿದೆ. ಈ ದತ್ತಕಣಜದಲ್ಲಿರುವ ಸಂಶೋಧನಾ ಮಾಹಿತಿಗಳಿಂದ ಇಂದು ಯಾವ ಯಾವ ಜ್ಞಾನಕ್ಷೇತ್ರದಲ್ಲಿ. ಯಾವ್ಯಾವ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗ್ಗೆ ಸಂಶೋಧನೆಗಳು ನಡೆದಿವೆ ಹಾಗೂ ಇನ್ನು ಯಾವ್ಯಾವ ಜ್ಞಾನಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯಬೇಕಿವೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. ಈ `ಸಂಶೋಧನಾ ಕರ್ನಾಟಕ’ ದತ್ತಕಣಜದ ಮೂಲಕವೇ ಇಂದು ನಮ್ಮ ನಾಡಿನ ಉನ್ನತ ಶಿಕ್ಷಣ ವ್ಯವಸ್ಥೆಗೆ ಸವಾಲು ಹಾಗೂ ಸಮಸ್ಯೆಯಾಗಿ ನಿಂತಿರುವ ಕನ್ನಡ-ಕರ್ನಾಟಕತ್ವಕ್ಕೆ ಸಂಬಂಧಿಸಿದಂತೆ `ಸಂಶೋಧನೆಗಳಲ್ಲಿ ಪುನರಾವರ್ತನೆ’ ಯಂತಹ ಗಂಬೀರ ಸಮಸ್ಯೆಯನ್ನು ನಿಭಾಯಿಸಬಹುದಾಗಿದೆ.
ನಿಯತಕಾಲಿಕೆ ವಿಭಾಗ ಮತ್ತು Network ಸೌಲಭ್ಯಗಳು:
`ಅಕ್ಷರ’ಗ್ರಂಥಾಲಯವು DELNET ಮತ್ತು J-GATE ಸೌಲಭ್ಯವನ್ನು ಹೊಂದಿದ್ದು, ಈ ನೆಟ್ವರ್ಕ್ಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗೆ ಅಗತ್ಯವಿರುವ ನೂರಾರು ಪುಸ್ತಕಗಳ ಹಾಗೂ ವಿದ್ವತ್ ನಿಯತಕಾಲಿಕೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
`ಅಕ್ಷರ’ಗ್ರಂಥಾಲಯದ ನಿಯತಕಾಲಿಕೆ ವಿಭಾಗದಲ್ಲಿ ಕನ್ನಡದ ಹಳೆಯ ಸಾಹಿತ್ಯಿಕ ಪತ್ರಿಕೆಗಳ ಹಾಗೂ ಇಂಗ್ಲೀಷ್ನ ವಿದ್ವತ್ಪೂರ್ಣ ನಿಯತಕಾಲಿಕೆಗಳ ಹಳೆ ಸಂಪುಟಗಳು (back volumes) ವ್ಯವಸ್ಥಿತವಾಗಿ ಲಭ್ಯವಿದ್ದು, ಪ್ರಸ್ತುತ 2016-17ರ ಶೈಕ್ಷಣಿಕ ಸಾಲಿನಲ್ಲಿ ಗ್ರಂಥಾಲಯಕ್ಕೆ 20 ವಿದ್ಯತ್ಪೂರ್ಣ ಇಂಗ್ಲೀಷ್ ನಿಯತಕಾಲಿಕೆಗಳು ಹಾಗೂ 8 ಕನ್ನಡ ಸಾಹಿತ್ಯಿಕ ನಿಯತಕಾಲಿಕೆಗಳನ್ನು ತರಿಸಲಾಗುತ್ತಿದೆ. ಈ ವಿಭಾಗದಲ್ಲಿರುವ ನೆಟ್ವರ್ಕ್ಗಳ ಮೂಲಕ ಓದುಗರು e-Journals ಪ್ರಯೋಜನವನ್ನೂ ಪಡೆಯುತ್ತಿದ್ದಾರೆ.
`ಅಕ್ಷರ’ ಗ್ರಂಥಾಲಯದ ಎಲ್ಲ ವಿಭಾಗಗಳ ವೃತ್ತಿಪರ ಕೆಲಸ ಮತ್ತು ಗ್ರಂಥಾಲಯದ ವ್ಯವಹಾರಗಳನ್ನು NEWGENLIB ಎಂಬ Software ಮೂಲಕ ನಿರ್ವಹಿಸಲಾಗುತ್ತಿದ್ದು, ಗ್ರಂಥಾಲಯದ ಎಲ್ಲ ವಿಭಾಗಗಳು ಇದೀಗ ಸಂಪೂರ್ಣವಾಗಿ ಕಂಪ್ಯೂಟರೀಕೃತಗೊಂಡಿವೆ. ಸದ್ಯ ಪುಸ್ತಕಗಳ ಡಿಜಟೀಲಿಕರಣದ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ.