ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0ನ್ನು ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

( File Format : Zip File Size : 13.7 MB Updated Date : 04.02.2011 )

ಯೂನಿಕೋಡ್ ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

( File Format : Zip File Size : 8.85 MB Updated Date : 04.02.2011 )

ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ

( File Format : Zip File Size : 3.93 MB Updated Date : 04.02.2011)

kuvempu-tejaswi

ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ
ನೆನಪಿಗಾಗಿ ನಾವು
`ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ವನ್ನು
ಅರ್ಪಿಸುತ್ತಿದ್ದೇವೆ.

ಕುವೆಂಪು ಕನ್ನಡ ತಂತ್ರಾಂಶ – ಗಣ್ಯರ ಮಾತು

ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0

ಕನ್ನಡ ವಿಶ್ವವಿದ್ಯಾಲಯವು ಈ ಹಿಂದೆ ಬಿಡುಗಡೆ ಮಾಡಿದ್ದ ಕುವೆಂಪು ಕನ್ನಡ ತಂತ್ರಾಂಶ 1.0ರಲ್ಲಿ ಕಂಡುಬಂದಂತಹ ನ್ಯೂನ್ಯತೆಗಳನ್ನು ಸರಿಪಡಿಸಿ ಹೊಸದಾಗಿ ಮೂರು ಬಗೆಯ ಪರಿವರ್ತಕಗಳನ್ನು, ಹಿಂದಿನ ನಾಲ್ಕು ಕೀಲಿಮಣೆ ವಿನ್ಯಾಸಗಳ ಜೊತೆಗೆ ಒಂದು ಬಗೆಯ ಕೀಲಿಮಣೆ ವಿನ್ಯಾಸವನ್ನು ಹಾಗೂ ಸೊನಾಟ ಕಂಪನಿಯ ಪ್ರಕಾಶಕ್ ಕನ್ನಡ ತಂತ್ರಾಂಶದ ಪ್ರಜಾ ಅಕ್ಷರ ವಿನ್ಯಾಸ ಮಾದರಿಯ ನಾಲ್ಕು ಬಗೆಯ ಅಕ್ಷರ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಐದು ವಿವಿಧ ಬಗೆಯ ಕೀಲಿಮಣೆ ವಿನ್ಯಾಸಗಳನ್ನು ಕುವೆಂಪು ಕನ್ನಡ ತಂತ್ರಾಂಶವು ಹೊಂದಿರುವುದರಿಂದ ಬಳಕೆದಾರರಿಗೆ ಹೆಚ್ಚು ಅನುಕೂಲವಾಗುತ್ತದೆ. ವಿಶೇಷವಾಗಿ ಬೆರಳಚ್ಚು ಯಂತ್ರದಲ್ಲಿ ಬೆರಳಚ್ಚು ಮಾಡುವುದನ್ನು ಅಭ್ಯಾಸ ಮಾಡಿದವರಿಗೂ ಬೆರಳಚ್ಚು ಯಂತ್ರದ ಕೀಲಿಮಣೆ ವಿನ್ಯಾಸದಂತಹ ಒಂದು ವಿನ್ಯಾಸ, ಕೆ.ಪಿ.ರಾವ್ ಫೊನೆಟಿಕ್ ಕೀಲಿಮಣೆ ವಿನ್ಯಾಸದಂತಹ ಎರಡು ಬಗೆಯ ಕೀಲಿಮಣೆ ವಿನ್ಯಾಸ, ಎಸ್ಆರ್ ಜಿ ತಂತ್ರಾಂಶದ ಕೀಲಿಮಣೆ ವಿನ್ಯಾಸದಂತಹ ಒಂದು ಕೀಲಿಮಣೆ ವಿನ್ಯಾಸ ಮತ್ತು ಪ್ರಕಾಶಕ್ ತಂತ್ರಾಂಶದ ಕೀಲಿಮಣೆ ವಿನ್ಯಾಸದಂತಹ ಒಂದು ಕೀಲಿಮಣೆ ವಿನ್ಯಾಸವನ್ನು ಕುವೆಂಪು ಕನ್ನಡ ತಂತ್ರಾಂಶ-2.0 ಆವೃತ್ತಿಯಲ್ಲಿ ಅಳವಡಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ವಿವಿಧ ಬಗೆಯ ಕೀಲಿಮಣೆ ವಿನ್ಯಾಸ, ವಿವಿಧ ಬಗೆಯ ಅಕ್ಷರ ವಿನ್ಯಾಸ, ವಿವಿಧ ಬಗೆಯ ಅಂಚಿನ ವಿನ್ಯಾಸ, ವಿವಿಧ ಬಗೆಯ ಪರಿವರ್ತಕ ಮತ್ತು ಸಹಾಯ ಕಡತ ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕುವೆಂಪು ಕನ್ನಡ ತಂತ್ರಾಂಶ-2.0 ಆವೃತ್ತಿಯನ್ನು ನಾಡಿಗೆ ಲೋಕಾರ್ಪಣೆ ಮಾಡಲು ಸಂತೋಷಪಡುತ್ತೇವೆ.

ಕುವೆಂಪು ಕನ್ನಡ ತಂತ್ರಾಂಶ ಯುನಿಕೋಡ್ ಆವೃತ್ತಿ 1.0

ಅಂತರ್ಜಾಲ ತಾಣದಲ್ಲಿ ಕನ್ನಡವನ್ನು ಸರ್ವವ್ಯಾಪಿಯಾಗಿ ಬೆಳೆಯಲು ಕನ್ನಡ ವಿಶ್ವವಿದ್ಯಾಲಯವು ನಿರಂತರವಾಗಿ ಶ್ರಮಿಸುತ್ತಿದ್ದು, ಈ ಹಿಂದೆ ಅಭಿವೃದ್ಧಿಪಡಿಸಿದ್ದ ಆಸ್ಕಿ ಅವತರಣಿಕೆಯ ಜೊತೆಗೆ ಯೂನಿಕೋಡ್ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಗಿದೆ.

ಯೂನಿಕೋಡ್ ನ ಅಗತ್ಯತೆ ಇರುವುದನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಮೊಟ್ಟ ಮೊದಲನೆಯದಾಗಿ ತಿಳಿಸಿಕೊಟ್ಟವರು ಕನ್ನಡದ ಹಿರಿಯ ಸಾಹಿತಿ ಮತ್ತು ಚಿಂತಕರಾದ ದಿ||ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು. ತೇಜಸ್ವಿ ಅವರ ವಿಶೇಷವಾದ ಅನುಭವ ಮತ್ತು ಸೃಜನಶೀಲ ತಾಂತ್ರಿಕ ಪರಿಣತಿ ಕುವೆಂಪು ಕನ್ನಡ ತಂತ್ರಾಂಶದ ಯೂನಿಕೋಡ್ ನ ಅಭಿವೃದ್ಧಿಗೆ ಮಾರ್ಗದರ್ಶನವಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಬಿಡುಗಡೆ ಮಾಡುತ್ತಿರುವ ಕುವೆಂಪು ಕನ್ನಡ ತಂತ್ರಾಂಶ ಯೂನಿಕೋಡ್ ಆವೃತ್ತಿ 1.0ರಲ್ಲಿ ಒಂದು ಬಗೆಯ ಕೀಲಿಮಣೆ ವಿನ್ಯಾಸ ಮತ್ತು ನಾಲ್ಕು ಬಗೆಯ ಯೂನಿಕೋಡ್ ಅಕ್ಷರ ವಿನ್ಯಾಸಗಳನ್ನು ಅಳವಡಿಸಲಾಗಿದೆ. ಯೂನಿಕೋಡ್ನೊಂದಿಗೆ ಕಾರ್ಯನಿರ್ವಹಿಸುವ ಯಾವುದೇ ತಂತ್ರಾಂಶದಲ್ಲಿಯೂ ಸಹ ಕುವೆಂಪು ಕನ್ನಡ ತಂತ್ರಾಂಶವು ಕಾರ್ಯನಿರ್ವಹಿಸುವುದು. ಮುಂದಿನ ಅವತರಣಿಕೆಗಳಲ್ಲಿ ವಿವಿಧ ಬಗೆಯ ಕೀಲಿಮಣೆ ವಿನ್ಯಾಸಗಳನ್ನು ಮತ್ತು ಅಲಂಕಾರಿಕ ಅಕ್ಷರ ವಿನ್ಯಾಸಗಳನ್ನು, ಕಡತದಿಂದ ಕಡತಕ್ಕೆ ಮತ್ತು ಫೋಲ್ಡರ್ ನಿಂದ ಫೋಲ್ಡರ್ ಗೆ ಆಸ್ಕಿಯಿಂದ ಯೂನಿಕೋಡ್ ಗೆ ಪರಿವರ್ತನೆಯಾಗುವ ಪರಿವರ್ತಕಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗುವುದು. ಸಮಸ್ತ ಕನ್ನಡಿಗರು ಈ ಕುವೆಂಪು ಕನ್ನಡ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಪ್ರೋತ್ಸಾಹಿಸಬೇಕೆಂದು ಕೋರುತ್ತೇನೆ.

ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0

ಕರ್ನಾಟಕ ರಾಜ್ಯದ ಹೈಕೋರ್ಟ್ ಗಣಕ ಕೇಂದ್ರವು ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0ಅನ್ನು ಬಳಕೆ ಮಾಡಿ, ಕುವೆಂಪು ಕನ್ನಡ ತಂತ್ರಾಂಶವನ್ನು ವಿಂಡೋಸ್ ಎನ್ ಟಿ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಿ ಕೊಡಲು ಕೋರಿದ ಮೇರೆಗೆ ಈ ಕುವೆಂಪು ಕನ್ನಡ ತಂತ್ರಾಂಶ ಎನ್ ಟಿ ಆವೃತ್ತಿ1.0ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗುತ್ತಿದೆ. ಈ ತಂತ್ರಾಂಶವು ವಿವಿಧ ಬಗೆಯ ಕೀಲಿಮಣೆ ವಿನ್ಯಾಸಗಳನ್ನು ಬಂದಿದ್ದು, ಎನ್ ಟಿ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕರ್ನಾಟಕದ ಎಲ್ಲಾ ಕೋರ್ಟ್ ಕಛೇರಿಗಳನ್ನೂ ಒಳಗೊಂಡಂತೆ ಯಾವುದೇ ಬೆರಳಚ್ಚುಗಾರರು ಬಳಕೆ ಮಾಡಲು ಹೆಚ್ಚಿನ ಸಹಾಯಕವಾಗುತ್ತದೆ. ಮುಂದಿನ ಅವತರಣಿಕೆಯಲ್ಲಿ ಫೋಲ್ಡರ್ ಟು ಫೋಲ್ಡರ್ ಗೆ ದತ್ತಾಂಶವನ್ನು ಪರಿವರ್ತಿಸುವಂತಹ ಪರಿವರ್ತಕ ಮತ್ತು ನೂತನ ಕೀಲಿಮಣೆ ವಿನ್ಯಾಸವನ್ನು ಕುವೆಂಪು ಕನ್ನಡ ತಂತ್ರಾಂಶದಲ್ಲಿ ಸೇರಿಸಿ ಬಿಡುಗಡೆ ಮಾಡಲಾಗುವುದು.

ಆಧುನಿಕ ಸನ್ನಿವೇಶದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ, ಹಂಪಿಯು ರೂಪಿಸಿದ ಕುವೆಂಪು ಕನ್ನಡ ತಂತ್ರಾಂಶ ಎನ್ ಟಿ 1.0′ ಅನ್ನು ಕನ್ನಡಿಗರು ಆದರದಿಂದ ಬರಮಾಡಿಕೊಂಡು ದೈನಂದಿನ ಬಳಕೆಯಲ್ಲಿ ಉಪಯೋಗಿಸಬೇಕೆಂದು ಸಮಸ್ತ ಕನ್ನಡಿಗರಲ್ಲಿ ವಿನಂತಿಸಿಕೊಳ್ಳುತ್ತೇನೆ.

* * * *

ಕನ್ನಡದಲ್ಲಿ ಇಂತಹ ಒಂದು ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ತಿಳಿಸಿದ ಮತ್ತು ಈ ಕುವೆಂಪು ಕನ್ನಡ ತಂತ್ರಾಂಶವನ್ನು ರೂಪಿಸಲು ಎಲ್ಲಾ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆ ಮತ್ತು ನೆರವನ್ನು ಇತ್ತ ಕನ್ನಡದ ಹಿರಿಯ ಸಾಹಿತಿ ಮತ್ತು ಚಿಂತಕರಾದ ದಿ|| ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಿಗೆ ನಮ್ಮ ಕೃತಜ್ಞತೆಗಳು. ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಮತ್ತು ಕನ್ನಡದ ಹಿರಿಯ ಸಾಹಿತಿಗಳೂ ಆದ ಡಾ. ಚಂದ್ರಶೇಖರ ಕಂಬಾರರು ತಮ್ಮ ಶಾಸಕರ ನಿಧಿಯಿಂದ ಪ್ರಾರಂಭಿಕ ಆರ್ಥಿಕ ನೆರವನ್ನು ನೀಡಿ ಸಹಕರಿಸಿದ್ದಾರೆ ಅವರಿಗೂ ನಮ್ಮ ಕೃತಜ್ಞತೆಗಳು.

ಕನ್ನಡ ವಿಶ್ವವಿದ್ಯಾಲಯದ ಈ ನೂತನ ಪ್ರಯತ್ನಕ್ಕೆ ಹಾಸನದ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರಾದ ಶ್ರೀ ಆನಂದ್, ಶ್ರೀ ಹೆಚ್.ಎಸ್. ಸುಧೀರ ಮತ್ತು ಶ್ರೀ ಮಂಜಾಚಾರ್ ಇವರುಗಳ ಪ್ರೀತಿಯ ಕಾಯಕ ಅರ್ವವಾದುದು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಮತ್ತು ಹಿರಿಯ ಗಣಕ ತಜ್ಞರು ಆಗಿರುವ ಡಾ. ಕೆ. ಚಿದಾನಂದಗೌಡರು ಮತ್ತು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಡಾ. ಟಿ.ಎನ್. ನಾಗಭೂಷಣ್ ಅವರು ಸಮಾಲೋಚಕ ತಜ್ಞರಾಗಿ ನಿರಂತರ ತಮ್ಮ ಮಾರ್ಗದರ್ಶನ ಮತ್ತು ಅನುಭವದ ಸಲಹೆಗಳ ಮೂಲಕ ಸಮರ್ಪಕ ನಿರ್ವಹಣೆಗೆ ಸಹಕರಿಸಿದ್ದಾರೆ. ನಮ್ಮ ಕನ್ನಡ ವಿಶ್ವವಿದ್ಯಾಲಯದ ಗಣಕ ಕೇಂದ್ರದ ಸಹಾಯಕ ನಿರ್ದೇಶಕರಾದ ಶ್ರೀ ಎಸ್.ಕೆ. ವಿಜಯೇಂದ್ರ ಅವರು ತಾಂತ್ರಿಕ ಹಾಗೂ ಸಂಯೋಜನೆಯ ಸಹಕಾರವನ್ನು ನೀಡಿದ್ದಾರೆ.

ಕುವೆಂಪು ಕನ್ನಡ ತಂತ್ರಾಂಶಕ್ಕೆ ಪ್ರಕಾಶಕ್ ಕನ್ನಡ ತಂತ್ರಾಂಶದ ಪ್ರಜಾ ಮಾದರಿಯ ನಾಲ್ಕು ಬಗೆಯ ಅಕ್ಷರ ವಿನ್ಯಾಸಗಳನ್ನು ಮತ್ತು ಕೀಲಿಮಣೆ ವಿನ್ಯಾಸವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ ಸೊನಾಟ ಕಂಪನಿಯವರಿಗೆ, ಕುವೆಂಪು ಕನ್ನಡ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಆವೃತ್ತಿ-1.0ರಲ್ಲಿ ಇದ್ದಂತಹ ನ್ಯೂನ್ಯತೆಗಳನ್ನು ಸರಿಪಡಿಸಲು ತಿಳಿಸಿಕೊಟ್ಟಂತಹ ಪುಸ್ತಕ ಪ್ರಕಾಶನದ ಆರ್. ರಾಘವೇಂದ್ರ ಅವರಿಗೂ, ಕುಪ್ಪಳ್ಳಿಯ ಕುವೆಂಪು ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರಿಗೂ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿಗಳಾದ ಶ್ರೀ ಕಡಿದಾಳ್ ಪ್ರಕಾಶ್ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳಿಗೂ, ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಬಿ.ಸುಜ್ಞಾನಮೂರ್ತಿ ಅವರಿಗೂ, ಆಡಳಿತಾತ್ಮಕ ಸಹಕಾರ ನೀಡಿದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಮಂಜುನಾಥ್ ಬೇವಿನಕಟ್ಟಿ ಮತ್ತು ಉಪಕುಲಸಚಿವರಾದ ಡಾ. ಪ್ರೇಮಕುಮಾರ್ ಅವರಿಗೂ ಹಾಗೂ ಈ ತಂತ್ರಾಶವನ್ನು ಅಭಿವೃದ್ಧಿ ಪಡಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೆರವನ್ನು ನೀಡಿದವರೆಲ್ಲರಿಗೂ ನಮ್ಮ ಅಭಿನಂದನೆಗಳು.

ಕುವೆಂಪು ಕನ್ನಡ ತಂತ್ರಾಂಶದ ಎಲ್ಲಾ ಅವತರಣಿಕೆಗಳು ಉಚಿತವಾಗಿ ಲಭ್ಯವಿದ್ದು, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಅಂತರ್ಜಾಲ ತಾಣ www.kannadauniversity.org ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಕುವೆಂಪು ಕನ್ನಡ ತಂತ್ರಾಂಶದ ಮುಂದಿನ ಅಭಿವೃದ್ಧಿಗೆ ನಿಮ್ಮ ಸಲಹೆ ಸೂಚನೆ, ಮಾರ್ಗದರ್ಶನಗಳನ್ನು ಇ-ಮೇಲ್ ಮೂಲಕ ಕಳುಹಿಸಬಹುದು. ಇಮೇಲ್ ವಿಳಾಸ: kannadakuvempu@gmail.com

ಪ್ರೊ. ಎ. ಮುರಿಗೆಪ್ಪ
ವಿಶ್ರಾಂತ ಕುಲಪತಿಗಳು

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣದ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಹಾಗೂ ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವು ಆಗಿವೆ. `ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. `ಕನ್ನಡ’ ಮತ್ತು `ಅಭಿವೃದ್ಧಿ’ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾ ತಜ್ಞರ, ತಂತ್ರಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ.

ಕನ್ನಡ ತಂತ್ರಾಂಶದ ಸಮಸ್ಯೆಯು ಬಹಳ ಸಂಕೀರ್ಣವೂ ಜಟಿಲವೂ ಆಗಿರುವ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು `ಕುವೆಂಪು ಕನ್ನಡ ತಂತ್ರಾಂಶ’ ಎಂಬ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸುವ ಮೂಲಕ ಕನ್ನಡಿಗರ ಅಗತ್ಯ ಮತ್ತು ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ಹೊತ್ತಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಗೊಳಿಸುವ ಮತ್ತು ಕನ್ನಡ ಭಾಷೆಯನ್ನು ಪ್ರಕಾಶನ, ಆಡಳಿತ, ಶಿಕ್ಷಣ, ಕಾನೂನು, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರ ಮುಂತಾದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಬಳಸುವ ಕೆಲಸವನ್ನು ನಿರ್ವಹಿಸುವುದು ಕನ್ನಡ ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಕನ್ನಡ ಭಾಷೆಯು ತಂತ್ರಾಂಶ ಕ್ಷೇತ್ರದಲ್ಲಿ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಮನಗೊಂಡು ಕನ್ನಡ ವಿಶ್ವವಿದ್ಯಾಲಯವು ನುರಿತ ತಂತ್ರಜ್ಞರ ಮಾರ್ಗದರ್ಶನದಲ್ಲಿ ಕುವೆಂಪು ಕನ್ನಡ ತಂತ್ರಾಂಶ ಎಂಬ ತಂತ್ರಾಂಶವನ್ನು ಸಿದ್ಧಪಡಿಸಿದೆ. ಈ ತಂತ್ರಾಂಶವು ಮುಖ್ಯವಾಗಿ (1) ಕನ್ನಡ ಭಾಷೆಗೆ ಒಗ್ಗುವ ವಿವಿಧ ಇಪ್ಪತ್ತು ನಮೂನೆಯ ಕನ್ನಡ ಅಕ್ಷರಗಳು (ಟಿ.ಟಿ.ಎಫ್ ಫಾಂಟ್ಸ್) (2) ವಿವಿಧ ಇಪ್ಪತ್ತು ನಮೂನೆಯ ಅಂಚಿನ ವಿನ್ಯಾಸಗಳ ಫಾಂಟ್ ಗಳು (ಬಾರ್ಡರ್ ಡಿಸೈನ್ ಗಳು) (3) ಹೇಮಾವತಿ, ನೇತ್ರಾವತಿ, ಶರಾವತಿ, ಕಾವೇರಿ ಎಂಬ ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸಗಳು (Keyboard Layouts) (4) ನಾಲ್ಕು ಪರಿವರ್ತಕಗಳು (Converters) ಹೊಂದಿದೆ. ಈ ತಂತ್ರಾಂಶವು ಕರ್ನಾಟಕ ಸರ್ಕಾರವು ನಿಗದಿಪಡಿಸಿದ ಗ್ಲಿಫ್ ಹಾಗೂ ಕೀಲಿಮಣೆಯ ಶಿಷ್ಟತೆ ಮತ್ತು ಏಕರೂಪತೆಗೆ ಅನುಗುಣವಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಮೇಲಿನ ನಾಲ್ಕು ಬಗೆಯ ಸೌಲಭ್ಯಗಳನ್ನು ಹೊಂದಿರುವ `ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ವನ್ನು ನಾಡಿಗೆ ಲೋಕಾರ್ಪಣೆ ಮಾಡಲು ಸಂತೋಷಪಡುತ್ತೇವೆ. ಕನ್ನಡದಲ್ಲಿ ಇಂತಹ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ತಿಳಿಸಿದವರು ಮತ್ತು ಈ ಕುವೆಂಪು ಕನ್ನಡ ತಂತ್ರಾಂಶವನ್ನು ರೂಪಿಸಲು ಎಲ್ಲಾ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆ ಮತ್ತು ನೆರವನ್ನು ಇತ್ತವರು ಕನ್ನಡದ ಹಿರಿಯ ಸಾಹಿತಿ ಮತ್ತು ಚಿಂತಕರಾದ ಶ್ರೀ ಪೂರ್ಣಚಂದ್ರ ತೇಜಸ್ವಿಯವರು. ಶ್ರೀ ತೇಜಸ್ವಿಯವರ ವಿಶೇಷವಾದ ಅನುಭವ ಮತ್ತು ಸೃಜನಶೀಲ ತಾಂತ್ರಿಕ ಪರಿಣತಿ ಮತ್ತು ನಿರಂತರ ಸಂಯೋಜನೆಯ, ಪ್ರೀತಿಯ ಕಾಯಕದ ಫಲವಾಗಿ ಕನ್ನಡ ವಿಶ್ವವಿದ್ಯಾಲಯವು ಈ ಕುವೆಂಪು ಕನ್ನಡ ತಂತ್ರಾಂಶವನ್ನು ಕನ್ನಡನಾಡಿಗೆ ಲೋಕಾರ್ಪಣೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಲು ಅಭಿಮಾನಪಡುತ್ತೇನೆ. ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನದ ಶ್ರೀ ಆನಂದ, ಶ್ರೀ ಮಂಜಾಚಾರಿ ಮತ್ತು ಶ್ರೀ ಸುಧೀರ್ ಅವರು ತಮ್ಮ ಯುವ ತಂಡದ ನೆರವಿನಿಂದ ಕನ್ನಡದ ಈ ಕನಸನ್ನು ನನಸನ್ನಾಗಿಸಿದ್ದಾರೆ. ಪರಿಶ್ರಮ ಮತ್ತು ಪ್ರೀತಿ, ಅನ್ವೇಷಕ ಪ್ರವೃತ್ತಿ ಮತ್ತು ಆನ್ವಯಿಕ ದೃಷ್ಟಿಯುಳ್ಳ ಈ ಮೂವರು ತರುಣ ತಂತ್ರಜ್ಞರ ಸಾಧನೆ ಅಪೂರ್ವವಾದುದು. ಕನ್ನಡ ವಿಶ್ವವಿದ್ಯಾಲಯದ ಈ ನೂತನ ಪ್ರಯತ್ನಕ್ಕೆ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಹಿರಿಯ ಗಣಕ ತಜ್ಞರೂ ಆಗಿರುವ ಡಾ. ಕೆ ಚಿದಾನಂದ ಗೌಡರು ಮತ್ತು ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಟಿ.ಎನ್. ನಾಗಭೂಷಣ್ ಅವರು ಸಮಾಲೋಚಕ ತಜ್ಞರಾಗಿ ನಿರಂತರ ತಮ್ಮ ಮಾರ್ಗದರ್ಶನ ಮತ್ತು ಅನುಭವದ ಸಲಹೆಗಳ ಮೂಲಕ ಸಮರ್ಪಕ ನಿರ್ವಹಣೆಗೆ ಸಹಕರಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಕನ್ನಡದ ಹಿರಿಯ ಸಾಹಿತಿಗಳೂ ಆದ ಡಾ. ಚಂದ್ರಶೇಖರ ಕಂಬಾರರು ತಮ್ಮ ಶಾಸಕರ ನಿಧಿಯಿಂದ ಈ ಪ್ರಯತ್ನಕ್ಕೆ ಪ್ರಾರಂಭಿಕ ಆರ್ಥಿಕ ನೆರವನ್ನು ಕೊಟ್ಟಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಗಣಕ ಕೇಂದ್ರದ ತಜ್ಞರಾದ ಶ್ರೀ ಎಸ್.ಕೆ.ವಿಜಯೇಂದ್ರ ಮತ್ತು ಶ್ರೀ ಜಿ.ಸಿ.ರಾಜಕೃಷ್ಣ ಅವರು ತಾಂತ್ರಿಕ ಹಾಗೂ ಸಂಯೋಜನೆಯ ಸಹಕಾರವನ್ನು ನೀಡಿದ್ದಾರೆ.

ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಆವೃತ್ತಿಯಲ್ಲಿದ್ದ ಲೋಪದೋಷಗಳನ್ನು ಬಳಕೆದಾರರಿಂದ ಪಡೆದು `ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ಅನ್ನು ಸಿದ್ಧಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ನಮ್ಮೊಡನೆ ಇಲ್ಲದಿರುವುದು ತುಂಬಾ ವಿಷಾದದ ಸಂಗತಿ.

ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ
ನೆನಪಿಗಾಗಿ ನಾವು
`ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 1.0′ ವನ್ನು
ಅರ್ಪಿಸುತ್ತಿದ್ದೇವೆ.

ಕುವೆಂಪು ಕನ್ನಡ ತಂತ್ರಾಂಶವು ಉಚಿತವಾಗಿ ಲಭ್ಯವಿದ್ದು, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಅಂತರ್ಜಾಲ ತಾಣ www.kannadauniversity.org ನಲ್ಲಿ ಈ ತಂತ್ರಾಂಶದ ಆವೃತ್ತಿ 1.0 ಅನ್ನು ಡೌನ್ ಲೋಡ್ ಮಾಡಿಕೊಂಡು ಬಳಸಬಹುದು. ಈ ತಂತ್ರಾಂಶದ ಮುಂದಿನ ಅಭಿವೃದ್ಧಿಗೆ ನಿಮ್ಮ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಇ-ಮೇಲ್ ಮೂಲಕ ಈ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ವಿಳಾಸ: kannadakuvempu@gmail.com

ಕುವೆಂಪು ಕನ್ನಡ ತಂತ್ರಾಂಶ 1.0 ಆವೃತ್ತಿಯ ಜೊತೆಗೆ ತಂತ್ರಾಂಶದ ಓಪನ್ ಸೋರ್ಸ್ಕೋಡ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕ್ರಮವು ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಪ್ರಥಮ ಹೆಜ್ಜೆಯಾಗಿದೆ. ಈವರೆಗೂ ಕನ್ನಡ ಲಿಪಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿರುವ ತಂತ್ರಜ್ಞರು ಸೋರ್ಸ್ ಕೋಡ್ ಅನ್ನು ನೀಡಿರುವುದಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಸಹಾಯಕವಾಗಲು ವಿಶ್ವವಿದ್ಯಾಲಯವು ಓಪನ್ ಸೋರ್ಸ್ ಕೋಡ್ ನೀಡುತ್ತಿದೆ. ಇದನ್ನು ಪಡೆಯುವ ಬಗೆಗಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸಬದಾಗಿದೆ.

ಮುಂದಿನ ಆವೃತ್ತಿಗಳಲ್ಲಿ ಯೂನಿಕೋಡ್ ಇಂಜಿನ್, ಯೂನಿಕೋಡ್ ಫಾಂಟ್ಸ್, ಹೆಚ್ಚಿನ ಪರಿವರ್ತಕಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.

ಆಧುನಿಕ ಸನ್ನಿವೇಶದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ, ಹಂಪಿಯು ರೂಪಿಸಿದ `ಕುವೆಂಪು ಕನ್ನಡ ತಂತ್ರಾಂಶ 1.0′ ಅನ್ನು ಕನ್ನಡಿಗರು ಆದರದಿಂದ ಬರಮಾಡಿಕೊಂಡು ನಂದಿನ ಬಳಕೆಯಲ್ಲಿ ಉಪಯೋಗಿಸಬೇಕೆಂದು ಸಮಸ್ತ ಕನ್ನಡಿಗರಲ್ಲಿ ವಿನಂತಿಸಿಕೊಳ್ಳುತ್ತೇನೆ.

– ಡಾ. ಬಿ.ಎ. ವಿವೇಕ ರೈ
ಕುಲಪತಿಗಳು

(ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದು ಕಳುಹಿಸಿದ್ದ ಭಾಷಣದ ಪ್ರತಿ)

ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು. ಎಷ್ಟು ಅದ್ದೂರಿಯ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ, ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ, ಚಳವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ. ಈ ದೃಷ್ಟಿಯಿಂದ ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶ ಭಾಷೆಗಳೂ ತುಂಬ ಅಪಾಯಕರ ಪರಿಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಕಂಪ್ಯೂಟರ್, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಅವರಿಸುತ್ತಿದೆ. ನಾವು ಕಂಪ್ಯೂಟರಿನಲ್ಲಿ ಇಂಗ್ಲೀಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನೂ ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕಂಪ್ಯೂಟರೇನು ಕನ್ನಡಕ್ಕೆ ಹೊಸದಲ್ಲ. ನಮ್ಮ ತಂತ್ರಜ್ಞರು ಬಹಳ ಹಿಂದೆಯೇ ಕನ್ನಡ ಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸಿದ್ದರು. ಮುದ್ರಣ, ಪುಸ್ತಕ ಪ್ರಕಾಶನ, ಕಚೇರಿಯ ವಹಿವಾಟುಗಳಲ್ಲಿ, ಟೈಪ್ರೈಟರ್ ಯಂತ್ರಕ್ಕಿಂತ ಹೆಚ್ಚು ವ್ಯಾಪಕವಾಗಿ, ಸಮರ್ಪಕವಾಗಿ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಸಾಧ್ಯವಿತ್ತು. ಆದರೆ ಕನ್ನಡ ತಂತ್ರಾಂಶ ಕ್ಷೇತ್ರ, ವಿಪರೀತ ಅಸ್ತವ್ಯಸ್ತ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಕನ್ನಡಕ್ಕೆ ಬಳಸುವ ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆ ಇರಲಿಲ್ಲ. ಅಷ್ಟೆ ಅಲ್ಲದೆ ಕನ್ನಡ ಅಕ್ಷರಗಳ ಎನ್ಕೋಡಿಂಗ್ ಸಹ ಒಬ್ಬೊಬ್ಬರದು ಒಂದೊಂದು ರೀತಿ ಇತ್ತು. ಒಬ್ಬರ ತಂತ್ರಾಂಶದಲ್ಲಿ ರೂಪಿಸಿದ ಫೈಲ್ ಗಳನ್ನು ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿ ತೆರೆಯುವಂತಿರಲಿಲ್ಲ. ಕೀಲಿಮಣೆ ವಿನ್ಯಾಸ ಸಹ ಬದಲಾಗುತ್ತಿದ್ದುದರಿಂದ, ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿದವನು ಇನ್ನೊಂದರಲ್ಲಿ ಮಾಡುವಂತಿರಲಿಲ್ಲ. ದಿನಗಳೆದಂತೆ ಕನ್ನಡ ತಂತ್ರಾಂಶ ಕ್ಷೇತ್ರ ಅವ್ಯವಸ್ಥೆಯ ಆಗರವಾಗತೊಡಗಿತು. ಇವೆಲ್ಲವನ್ನೂ ನಿರ್ದೇಶಿಸಿ ನಿಯಂತ್ರಿಸಲು ಸಾಧ್ಯವಿದ್ದುದು ತಂತ್ರಾಂಶದ ಅತಿ ದೊಡ್ಡ ಗ್ರಾಹಕವಾದ ಸರ್ಕಾರಕ್ಕೆ, ಇಲ್ಲವೆ ಈ ನಾಡಿನ ವಿಶ್ವವಿದ್ಯಾಲಯಗಳಿಗೆ. ದುರದೃಷ್ಟವಶಾತ್ ಇವರು ಯಾರಿಗೂ ಎಲೆಕ್ಟ್ರಾನಿಕ್ ಮಾಧ್ಯಮದಿಂದ ನಮ್ಮ ಭಾಷೆಗಳಿಗೆ ಮುಂದೊದಗಲಿರುವ ಅಪಾಯವನ್ನು ಅಂದಾಜು ಮಾಡಲಾಗಲಿಲ್ಲ.

ಇಂಟರ್ನೆಟ್ ಆಗಮನದೊಂದಿಗೆ ಐಟಿ ಕ್ಷೇತ್ರ ಅಡೆತಡೆ ಇಲ್ಲದ ವೇಗದಲ್ಲಿ ವೈದ್ಯಕೀಯ ಕ್ಷೇತ್ರದಿಂದ ಹಿಡಿದು ವ್ಯಾಪಾರ ವಹಿವಾಟಿನವರೆಗೆ ತ್ರಿವಿಕ್ರಮ ಸದೃಶವಾಗಿ ಆಕ್ರಮಿಸುತ್ತಿದೆ. ಇ-ಮೇಲ್, ಇ-ವಾಣಿಜ್ಯ, ಇ-ಆಡಳಿತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹಸ್ತಾಂತರಿಸಲಾಗುತ್ತಿದೆ. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳ ಮುಕ್ಕಾಲು ಅಂಶವಾಗಿರುವುದಿಂದ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನು ಸಮರ್ಥವಾಗಿ ಉಪಯೋಗಿಸಲಾಗದಿದ್ದರೆ ಕನ್ನಡದ ದಿನಬಳಕೆ ಸಂಪೂರ್ಣ ಸ್ಥಗಿತವಾಗುತ್ತದೆ.

ಕನ್ನಡಕ್ಕಿರುವ ಸದ್ಯದ ಸೀಮಿತ ಮಾರುಕಟ್ಟೆ ದೆಸೆಯಿಂದ ಮತ್ತು ಸರ್ಕಾರದ ಹಲವು ತಪ್ಪು ನೀತಿಗಳಿಂದ ಕನ್ನಡ ಭಾಷೆಗೆ ಕೆಲಸ ಮಾಡುತ್ತಿದ್ದ ಸುಮಾರು ಇಪ್ಪತ್ತಮೂರು ಖಾಸಗಿ ಕಂಪನಿಗಳಲ್ಲಿ ಈಗ ಎರಡೇ ಎರಡು ಉಳಿದುಕೊಂಡಿವೆ. ಅವೂ ಸಹ ಬಂಡವಾಳದ ಮತ್ತು ಪ್ರೋತ್ಸಾಹದ ಕೊರತೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಲು ಯೋಚಿಸುತ್ತಿವೆ.

ಭಾಷೆಗೆ ಸಂಬಂಧಪಟ್ಟ ತಂತ್ರಾಂಶ ಅಭಿವೃದ್ಧಿ ಕೇವಲ ಸಾಫ್ಟ್ ವೇರ್ ಎಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾಶಾಸ್ತ್ರಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣತರು, ಉಚ್ಫಾರಣ ಶಾಸ್ತ್ರಜ್ಞರು ಮುಂತಾದವರೆಲ್ಲಾ ಸೇರಿ ಮಾಡಬೇಕಾದ ಕೆಲಸ. ಇದರ ಸಂಕೀರ್ಣತೆಯನ್ನೂ ಪ್ರಾಮುಖ್ಯತೆಯನ್ನೂ ಅರಿತು ಇವರೆಲ್ಲರನ್ನೂ ಒಟ್ಟು ಮಾಡಿ ಕೆಲಸ ಮಾಡಲು ಮುಂದಾಗುವಷ್ಟು ಸೂಕ್ಷ್ಮಜ್ಞತೆ ನಮ್ಮ ರಾಜಕಾರಣಿಗಳಲ್ಲಾಗಲೀ ಅಧಿಕಾರ ಶಾಹಿಯಲ್ಲಾಗಲೀ ಕಾಣದೇ ಅಸಹಾಯಕರಾಗಿ ನಾವು ಕುಳಿತಿದ್ದ ಸಂದರ್ಭದಲ್ಲಿ ಹಾಸನದ ಶ್ರೀ ಮಂಜಾಚಾರಿ, ಆನಂದ್, ಸುಧೀರ್ ಮೊದಲಾದ ತರುಣ ಸಾಫ್ಟ್ ವೇರ್ ಎಂಜಿನಿಯರುಗಳು ಕೇವಲ ಕನ್ನಡದ ಮೇಲಿನ ಅಭಿಮಾನದಿಂದ “ನಮ್ಮ ಕೈಲಾದುದನ್ನು ನಾವು ಮಾಡೇ ಮಾಡುತ್ತೇವೆ” ಎಂದು ಹಠ ಹಿಡಿದು ಮುಂದಾದರು. ಅದಕ್ಕೆ ತಕ್ಕಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀ ವಿವೇಕ ರೈಯವರು ಅದಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನೆಲ್ಲಾ ಒದಗಿಸಿಕೊಡಲು ಮುಂದಾಗಿದ್ದಲ್ಲದೆ ತಂತ್ರಾಂಶ ಅಭಿವೃದ್ಧಿಗಾಗಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಂದಿಗೆ ಅಲ್ಲಿ ಒಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ತಂತ್ರಾಂಶ ಶಾಖೆಯನ್ನೇ ತೆರೆದಿದ್ದಾರೆ. ಹಾಸನದ ತರುಣರ ಮತ್ತು ಹಂಪಿ ವಿಶ್ವವಿದ್ಯಾಲಯದ ಈ ಮಹತ್ಕಾರ್ಯ ಮುಂಬರುವ ದಿನಗಳಲ್ಲಿ, ಕನ್ನಡ ಭಾಷಾಭಿವೃದ್ಧಿಯ ದೃಷ್ಠಿಯಿಂದ ಚರಿತ್ರಾರ್ಹ ದಿನವಾಗಲಿದೆ.

ಈ ತಂತ್ರಾಂಶ “ವಿಂಡೋಸ್ 95” ರಿಂದ ಹಿಡಿದು “ವಿಂಡೋಸ್ ಎಕ್ಸ್ ಪಿ” ವರೆಗೆ ಎಲ್ಲ ಆವೃತ್ತಿಗಳಲ್ಲೂ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಇದರಿಂದ ಆಗುವ ದೊಡ್ಡ ಅನುಕೂಲವೆಂದರೆ ಇವರು ಕೊಟ್ಟಿರುವ ಪರಿವರ್ತಕಗಳನ್ನು ಉಪಯೋಗಿಸಿ ಬೇರೆ ಬೇರೆ ತಂತ್ರಾಂಶಗಳಲ್ಲಿ ಮಾಡಿರುವ ಸವಾಲುಗಳನ್ನು ಅಥವಾ ಕಡತಗಳನ್ನು ಈ ತಂತ್ರಾಂಶಕ್ಕೆ ಆಮದು ಮಾಡಿಕೊಂಡರೆ ಸಾಕು, ಅನಂತರ ವಿಂಡೋಸ್ ಯಾವ ಆವೃತ್ತಿಯಲ್ಲಿ ಬೇಕಾದರೂ ನಾವು ಕೆಲಸ ಮಾಡಬಹುದು. ಈ ತಂತ್ರಾಂಶವನ್ನು ಉಚಿತವಾಗಿ ಎಲ್ಲರೂ ಪಡೆದು ಉಪಯೋಗಿಸುವದಷ್ಟೇ ಅಲ್ಲದೆ, ಸೋರ್ಸ್ ಕೋಡ್ ಸಹ ಕೊಡಲು ಹಂಪೆ ವಿಶ್ವವಿದ್ಯಾಲಯ ಮುಂದೆ ಬಂದಿರುವುದರಿಂದ ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡಲು ಇಚ್ಫಿಸುವ ಎಲ್ಲ ತರುಣರಿಗೂ ಇದರಿಂದ ಅಪಾರ ಸಹಾಯವಾಗುತ್ತದೆ. ಇದೊಂದು ನಿಜವಾದ ಅರ್ಥದಲ್ಲಿ ಹಂಪೆ ಕನ್ನಡ ವಿಶ್ವವಿದ್ಯಾಲಯದ ಚರಿತ್ರಾರ್ಹವಾದ ಹೆಜ್ಜೆ.

ಆದರೂ ಇದೊಂದು ಮೊದಲ ಹೆಜ್ಜೆ ಮಾತ್ರ ಎನ್ನುವುದನ್ನು ನಾವು ಮರೆಯಬಾರದು. ಇಂಗ್ಲೀಷಿನಷ್ಟೆ ಸಮರ್ಥವಾಗಿ ಕನ್ನಡ ಭಾಷೆಯನ್ನೂ ಉಪಯೋಗಿಸಲು ಇನ್ನೂ ಬಹಳ ದೂರ ಹೋಗಬೇಕಾಗಿದೆ.