ನಿರ್ದೇಶಕರು
ಪ್ರಾಧ್ಯಾಪಕರ ಹುದ್ದೆಯಲ್ಲಿರುವ ಬೋಧಕವರ್ಗದವರು ಕುಲಪತಿಯವರಿಂದ ನಿಯೋಜಿಸಲ್ಪಟ್ಟು ಅಧ್ಯಯನಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕುಲಪತಿಯವರ ನಿರ್ದೇಶನದಲ್ಲಿ ನಿರ್ವಹಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ನಿರ್ದೇಶನಗಳನ್ನು ಕುಲಸಚಿವರು ನೀಡುತ್ತಾರೆ. ವಿಶ್ವವಿದ್ಯಾಲಯದ ಬಹುಮುಖ್ಯ ಚಟುವಟಿಕೆಯಾದ ಸಂಶೋಧನೆ, ಅಧ್ಯಯನ ಚಟುವಟಿಕೆಗಳ ಸಂಯೋಜನೆ, ನಿರ್ವಹಣೆಯನ್ನು ಈ ಮುಂದೆ ವಿವರಿಸುವಂತೆ ಅಧ್ಯಯನಾಂಗವು ನಿರ್ವಹಿಸುತ್ತದೆ.
ಅಧ್ಯಯನಾಂಗ
ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ವಿಭಾಗ. ಸಂಶೋಧನೆ, ಅಧ್ಯಯನ, ಪ್ರಧಾನ ಚಟುವಟಿಕೆಯಾಗಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯವಾಗಿ ಮೂರು ನಿಕಾಯಗಳು ಕಾರ್ಯನಿರತವಾಗಿವೆ. ಈ ಮೂರು ನಿಕಾಯಗಳ ವ್ಯಾಪ್ತಿಯಲ್ಲಿ ಕನ್ನಡದ, ಕರ್ನಾಟಕದ ಕಲೆ, ಸಂಸ್ಕೃತಿ, ಭಾಷೆ, ಸಾಹಿತ್ಯ, ಚರಿತ್ರೆ, ರಾಜಕೀಯ, ಆಕ, ಸಮಾಜ, ಸಮುದಾಯ, ಶಿಕ್ಷಣ ಮುಂತಾದ ವಿಷಯಗಳಲ್ಲಿ ಸಂಶೋಧನೆ, ಅಧ್ಯಯನದಲ್ಲಿ ವಿವಿಧ ಅಧ್ಯಯನ ವಿಭಾಗಗಳು ಕಾರ್ಯ ನಿರತವಾಗಿವೆ.
ಭಾಷಾ ನಿಕಾಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಭಾಷಾಂತರ ಅಧ್ಯಯನ ವಿಭಾಗ, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಹಸ್ತಪ್ರತಿಶಾಸ್ತ್ರ ವಿಭಾಗ, ಮಹಿಳಾ ಅಧ್ಯಯನ ವಿಭಾಗಗಳು ಕಾರ್ಯನಿರತವಾಗಿವೆ.
ಸಮಾಜವಿಜ್ಞಾನ ನಿಕಾಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ, ಬುಡಕಟ್ಟು ಅಧ್ಯಯನ ವಿಭಾಗ, ಚರಿತ್ರೆ ವಿಭಾಗ, ಪುರಾತತ್ವ ಅಧ್ಯಯನ ವಿಭಾಗ, ಶಾಸನಶಾಸ್ತ್ರ ಅಧ್ಯಯನ ವಿಭಾಗ, ಜಾನಪದ ಅಧ್ಯಯನ ವಿಭಾಗ, ಮಾನವಶಾಸ್ತ್ರ ಅಧ್ಯಯನ ವಿಭಾಗಗಳು ಕಾರ್ಯನಿರತವಾಗಿವೆ.
ಲಲಿತಕಲಾ ನಿಕಾಯದಲ್ಲಿ ದೃಶ್ಯಕಲಾ ವಿಭಾಗ, ಸಂಗೀತ ಮತ್ತು ನೃತ್ಯ ವಿಭಾಗಗಳು ಕಾರ್ಯನಿರತವಾಗಿವೆ.
ವೈಯಕ್ತಿಕ ಮತ್ತು ಸಾಂಸ್ಥಿಕ ಯೋಜನೆಗಳು
ಈ ಎಲ್ಲಾ ಅಧ್ಯಯನ ವಿಭಾಗಗಳಲ್ಲಿ ಬೋಧಕರು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಯೋಜನೆಗಳನ್ನು, ವಿಭಾಗದ ಎಲ್ಲಾ ಸದಸ್ಯರೂ ಕೂಡಿ ನಿರ್ವಹಿಸುವ ಸಾಂಸ್ಥಿಕ ಯೋಜನೆಗಳನ್ನು ಹಾಕಿಕೊಂಡು ವಿಭಾಗಗಳ ಅಧ್ಯಯನ ಮಂಡಳಿಯ ಅನುಮೋದನೆಯೊಂದಿಗೆ ಯೋಜನೆಗಳನ್ನು ನಿರ್ವಹಿಸುತ್ತಾರೆ.
ವಿಭಾಗಗಳ ಅಧ್ಯಯನ ಮಂಡಳಿಗಳಿಗೆ ಆಯಾ ವಿಭಾಗದ ಮುಖ್ಯಸ್ಥರು ಅಧ್ಯಕ್ಷರಾಗಿದ್ದು, ವಿಭಾಗದ ಎಲ್ಲಾ ಬೋಧಕರು ಸದಸ್ಯರಾಗಿರುತ್ತಾರೆ. ವಿಭಾಗಗಳ ಅವಶ್ಯಕತೆಗೆ ಅನುಗುಣವಾಗಿ ಬಾಹ್ಯ ವಿದ್ವಾಂಸರು, ಕ್ಷೇತ್ರ ತಜ್ಞರು ಅಧ್ಯಯನ ಮಂಡಳಿಯ ಸದಸ್ಯರಾಗಿರುತ್ತಾರೆ.
ಅಧ್ಯಯನ ಮಂಡಳಿಯ ಅನುಮೋದನೆ ಪಡೆದ ಯೋಜನಾ ಪ್ರಸ್ತಾವನೆಗಳನ್ನು ವಿಭಾಗವು ಅಧ್ಯಯನಾಂಗಕ್ಕೆ ಸಲ್ಲಿಸಿ ಅಧ್ಯಯನಾಂಗದ ಮುಖಾಂತರ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುತ್ತವೆ. ಮುಕ್ತಾಯಗೊಂಡ ಯೋಜನೆಗಳನ್ನು ವಿಭಾಗಗಳು ಮತ್ತೊಮ್ಮೆ ಅಧ್ಯಯನ ಮಂಡಳಿಯ ಶಿಫಾರಸ್ಸಿನೊಂದಿಗೆ ಅಧ್ಯಯನಾಂಗಕ್ಕೆ ಸಲ್ಲಿಸುತ್ತವೆ. ಹೀಗೆ ಸಲ್ಲಿಕೆಯಾದ ಯೋಜನೆಗಳನ್ನು ಕುಲಪತಿಯವರ ಅನುಮೋದನೆಯೊಂದಿಗೆ ಅಧ್ಯಯನಾಂಗವು ಪ್ರಸಾರಾಂಗಕ್ಕೆ ರವಾನಿಸುತ್ತದೆ.
ಎಂ.ಫಿಲ್, ಪಿಎಚ್.ಡಿ. ಮತ್ತು ಡಿ.ಲಿಟ್. ಕೋರ್ಸ್ ಗಳು
ಮೇಲಿನ ಎಲ್ಲಾ ನಿಕಾಯಗಳಲ್ಲಿಯೂ ಡಿಲಿಟ್ ಹಾಗೂ ಎಲ್ಲಾ ವಿಭಾಗಗಳೂ ಎಂ.ಫಿಲ್. ಮತ್ತು ಪಿಎಚ್.ಡಿ. ಕೋರ್ಸ್ ಗಳನ್ನು ನಡೆಸುತ್ತಿದ್ದು, (ಸಂಗೀತ ಮತ್ತು ನೃತ್ಯವಿಭಾಗದಲ್ಲಿ ಎಂ.ಫಿಲ್. ಕೋರ್ಸ್ ಇಲ್ಲ) ಅಧ್ಯಯನಾಂಗವು ಈ ಎಲ್ಲಾ ಕೋರ್ಸ್ಗಳ ಪಠ್ಯಕ್ರಮ, ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಯ ನಿರ್ವಹಣೆಯನ್ನು ಮಾಡುತ್ತದೆ.
ಎಂ.ಎ.ಪಿಎಚ್.ಡಿ. (ಕನ್ನಡ ಸಾಹಿತ್ಯ) ಸಂಯೋಜಿತ ಪದವಿ ಕೋರ್ಸ್
ಭಾಷಾ ನಿಕಾಯದಲ್ಲಿ ನಾಲ್ಕು ವರ್ಷಗಳ ಕನ್ನಡ ಎಂ.ಎ., ಪಿಎಚ್.ಡಿ. ಸಂಯೋಜಿತ ಪದವಿ ಕೋರ್ಸ್ ಮತ್ತು ಮಹಿಳಾ ಅಧ್ಯಯನ ಕೇಂದ್ರದಲ್ಲಿ ಮಹಿಳಾ ಅಧ್ಯಯನ ಎಂ.ಎ. ಸ್ನಾತಕೋತ್ತರ ಪದವಿಗಳಿದ್ದು ಈ ವಿಷಯಗಳ ಪ್ರವೇಶ, ಪಠ್ಯಕ್ರಮ, ಪರೀಕ್ಷೆ ಮತ್ತು ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಗಳ ಕೆಲಸವನ್ನು ಮಾಡುತ್ತದೆ.
ಎಂ.ವಿ.ಎ (ಚಿತ್ರಕಲೆ) ಸ್ನಾತಕೋತ್ತರ ಪದವಿ ಕೋರ್ಸ್
ಲಲಿತಕಲೆಗಳ ನಿಕಾಯದ ದೃಶ್ಯಕಲಾ ವಿಭಾಗದ ಎಂ.ವಿ.ಎ. ಸ್ನಾತಕೋತ್ತರ ಪದವಿ ಕೋರ್ಸ್ ನಡೆಯುತ್ತಿದೆ. ಚಿತ್ರಕಲಾ ಶಾಲೆಗಳ ಸೇವಾ ನಿರತ ಅಧ್ಯಾಪಕರೂ ಸಹಾ ಇದರ ಪ್ರಯೋಜನೆ ಪಡೆಯುತ್ತಿದ್ದಾರೆ. ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಸದ್ಯಕ್ಕೆ ಬಿ.ಮ್ಯೂಜಿಕ್ ಪದವಿ ತರಗತಿಗಳು ನಡೆಯುತ್ತಿದ್ದು ಈ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪರೀಕ್ಷೆ, ಫಲಿತಾಂಶ ಪ್ರಕಟಣೆಯ ಕೆಲಸವನ್ನು ಅಧ್ಯಯನಾಂಗ ನಿರ್ವಹಿಸುತ್ತದೆ.
ವಿಸ್ತರಣಾ ಕೇಂದ್ರಗಳು
ವಿಶ್ವವಿದ್ಯಾಲಯದ ಶೈಕ್ಷಣಿಕ ಯೋಜನೆಗಳನ್ನು ನಾಡಿನ ವಿವಿಧ ಭಾಗಗಳಲ್ಲದೆ ವಿಸ್ತರಿಸುವ ಉದ್ದೇಶದಿಂದ, ಕುಪ್ಪಳ್ಳಿಯ ಕುವೆಂಪು ಅಧ್ಯಯನ ಕೇಂದ್ರ, ಬಾದಾಮಿಯಲ್ಲಿ ವಾಸ್ತು, ಶಿಲ್ಪ ಮತ್ತು ಪ್ರತಿಮಾಶಾಸ್ತ್ರ ವಿಭಾಗ, ಕೂಡಲ ಸಂಗಮದಲ್ಲಿ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಮತ್ತು ಕುರುಬನಕಟ್ಟಿಯಲ್ಲಿ ದೇಸೀ ಸಂಸ್ಕೃತಿ ಅಧ್ಯಯನ ಕೇಂದ್ರಗಳನ್ನು ತೆರೆದಿದ್ದು ಈ ವಿಸ್ತರಣಾ ಕೇಂದ್ರಗಳಲ್ಲಿಯೂ ಎಂ.ಫಿಲ್. ಮತ್ತು ಪಿಎಚ್.ಡಿ. ಕೋರ್ಸ್ಗಳಿಗೆ ಅವಕಾಶ ಕಲ್ಪಿಸಿದೆ.
ಮಾನ್ಯತಾ ಸಂಸ್ಥೆಗಳು
ನಾಡಿನ ಹಲವಾರು ಶೈಕ್ಷಣಿಕ ಆಸಕ್ತಿಯ ಸಂಸ್ಥೆಗಳು ವಿಶ್ವವಿದ್ಯಾಲಯದ ಎಂ.ಫಿಲ್. ಮತ್ತು ಪಿಎಚ್.ಡಿ. ಕೋರ್ಸ್ಗಳನ್ನು ನಡೆಸಲು ಮಾನ್ಯತೆ ಪಡೆದಿದ್ದು ಇಲ್ಲಿನ ಅಭ್ಯರ್ಥಿಗಳು ಪ್ರವೇಶ ಆಯ್ಕೆ, ಪರೀಕ್ಷೆ, ಮೌಲ್ಯಮಾಪನ ಫಲಿತಾಂಶ ಪ್ರಕಟಣೆಯ ಕೆಲಸವನ್ನು ಅಧ್ಯಯನಾಂಗವೇ ನಡೆಸುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಶಾಸನಶಾಸ್ತ್ರ ಅಧ್ಯಯನ ಡಿಪ್ಲೋಮಾ ಮತ್ತು ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ಕಲೆ ಡಿಪ್ಲೊಮಾ ನಡೆಸಲು ವಿಶ್ವವಿದ್ಯಾಲಯ ಮಾನ್ಯತೆ ನೀಡಿದ್ದು ಈ ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷೆ, ಮೌಲ್ಯಮಾಪನ ಫಲಿತಾಂಶ ಪ್ರಕಟಣೆಯ ಕೆಲಸವನ್ನು ಅಧ್ಯಯನಾಂಗವೇ ನಡೆಸುತ್ತದೆ.
ಚಿತ್ರಕಲಾ ನಿರ್ವಹಣಾ ಕೇಂದ್ರ ಮತ್ತು ದೂರಶಿಕ್ಷಣ ಕೇಂದ್ರದ ಅಂಕಪಟ್ಟಿ ಹಾಗೂ ಇತರೆ ಶೈಕ್ಷಣಿಕ ಕಡತಗಳನ್ನು ಮಾನ್ಯರ ನಿರ್ದೇಶನದಂತೆ ಪರಿಶೀಲನೆ ಮಾಡಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುತ್ತಿದೆ.