ಕನ್ನಡದ ಕನ್ನಡ
ಪುರಾಣ ಮತ್ತು ಇತಿಹಾಸಗಳ ಸಂಗಮ ಕ್ಷೇತ್ರ ಹಂಪಿ. ಪ್ರಾಚೀನ ಉಲ್ಲೇಖಗಳ ಪ್ರಕಾರ ಜಗತ್ತಿನ ಮಾತಾ-ಪಿತರೆನಿಸಿದ ಶಿವ-ಪಾರ್ವತಿಯರು ವಿವಾಹವಾದ ಸ್ಥಳ ಇದು. ರಾಮಾಯಣದ ಕಾಲದಲ್ಲಿ ಅವತಾರ ಪುರುಷರೆನಿಸಿದ ರಾಮ ಮತ್ತು ಹನುಮಂತರು ಪರಸ್ವರ ಮುಖಾಮುಖಿಯಾಗಿ ಒಬ್ಬರ ಮನಸ್ಸು ಮತ್ತೊಬ್ಬರ ಮನಸ್ಸಿನಲ್ಲಿ ಸಂಲಗ್ನಗೊಳಿಸಿಕೊಂಡ ಸ್ಥಳ ಇದು. ಧಾರ್ಮಿಕವಾಗಿ ಭಾರತದ ಮುಖ್ಯ ಧರ್ಮಗಳಾದ ಬೌದ್ಧ, ಜೈನ, ಶೈವ, ವೀರಶೈವ, ವೈಷ್ಣವ ಮತ್ತು ಇಸ್ಲಾಂ ಧರ್ಮಗಳು ನೆಲೆಗೊಂಡು ಪರಸ್ವರ ಸಾಮರಸ್ಯದಿಂದ ಬದುಕಿದ ಮತ್ತು ತಮ್ಮ ಸುತ್ತ ವಿಶಿಷ್ಟ ಧಾರ್ಮಿಕ ಸಂಸ್ಕೃತಿಯನ್ನು ಹುಟ್ಟುಹಾಕಿದ ಸ್ಥಳ ಇದು. ಐತಿಹಾಸಿಕವಾಗಿ ಶಿಲಾಯುಗದ ಪ್ರಾಚೀನ ಅವಶೇಷಗಳನ್ನು ಗರ್ಭೀಕರಿಸಿಕೊಂಡಿರುವ ಪುರಾತನ ಪ್ರದೇಶ ಇದು. ಕರ್ನಾಟಕ ಸುಪ್ರಖ್ಯಾತ ಅರಸು ಮನೆತನಗಳಾದ ಹೊಯ್ಸಳರು, ಸಿಂಧರು, ಕಂಪಿಲ ಅರಸರು ಆಳಿದ ಮತ್ತು ತನ್ನ ವೈಭವ, ಶ್ರೀಮಂತಿಕೆ, ಕಲಾವಂತಿಕೆ, ಧೈರ್ಯ-ಸ್ಥೈರ್ಯಗಳ ಮೂಲಕ ವಿಶ್ವವಿ ಖ್ಯಾತಿ ಯನ್ನು ಪಡೆದ ವಿಜಯನಗರ ಮಹಾಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದು ಮೂರು ಶತಮಾನಗಳ ಕಾಲ ಜಗತ್ತಿನ ಕಣ್ಣು ಕುಕ್ಕುವಂತೆ ಮೆರೆದ ಸ್ಥಳವಿದು.
ಕವಿಗಳಾದ ಹರಿಹರ, ರಾಘವಾಂಕ, ಕುಮಾರವ್ಯಾಸರಂಥ ಕನ್ನಡದ ಸುಪ್ರಸಿದ್ಧ ಕವಿಗಳು, ಪುರಂದರದಾಸ, ಕನಕದಾಸ ಮುಂತಾದ ದಾರ್ಶನಿಕ ಕೀರ್ತನಕಾರರು ತಮ್ಮ ಸಾಹಿತ್ಯಕ ಶಕ್ತಿ ಮತ್ತು ದೈ ವಭಕ್ತಿಗಳನ್ನು ನಾಡಿನ ತುಂಬ ಹರಿಯಿಸಿದ ಜಾಗೃತ ಕ್ಷೇತ್ರವಿದು. ವಿರೂಪಾಕ್ಷ, ವಿಜಯವಿಠ್ಠಲ, ಹಜಾರರಾಮ ಮುಂತಾದ ಅಪರೂಪದ ಶಿಲ್ಪಕಲಾ ಸಂಗಮವೆನಿಸಿದ ದೇವಾಲಯಗಳು ರೂಪುಗೊಂಡು ಕನ್ನಡ ಜನತೆಯ ಭಕ್ತಿ-ಶಕ್ತಿಗಳ ಸಂಕೇತವಾಗಿ ಕೀರ್ತಿ ಪಡೆದ ಮಹಾಕ್ಷೇತ್ರ ಇದು. ಹೀಗೆ ಮತ್ತು ಹಲವು ದೃಷ್ಟಿಗಳಿಂದ ರಾಜಕಾರಣ, ಸಂಸ್ಕೃತಿ, ಧರ್ಮ, ರಾಷ್ಟ್ರಪ್ರೇಮ, ಕಲೆ, ಸಂಪತ್ತು ಮುಂತಾದ ಕಾರಣಗಳಿಂದಾಗಿ ವಿಶ್ವವ್ಯಾಪಕ ಪ್ರಸಿದ್ಧಿಯನ್ನು ಪಡೆದಿರುವ ಹಂಪಿ ಮೂಲತಃ ವಿದ್ಯಾನಗರವಾಗಿ ಮೂಡಿ, ಅನಂತರ ವಿಜಯನಗರವಾಗಿ ಅರಳಿ ಈಗ ವಿಶ್ವವಿದ್ಯಾಲಯ ನಗರವಾಗಿ ರೂಪುಗೊಂಡಿದೆ.
ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ
ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವ ಪೂರ್ಣವೂ ಆದ ವಿಶಿಷ್ಟ ಘ ಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘ ಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯ ಪೂ ರ್ಣವೂ ಆಗಿವೆ.
ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮ ರ್ಥ್ಯ ಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಭಾನ್ವಿತ ಕಾಯಕ ಇದರ ದಾರಿಯಾಗಿದೆ.
ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂ ಪೂ ರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; “ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು” ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.
ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವ ಪೂ ರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪು ಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ 900 ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂ ಥ ಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.
ವಾಸ್ತುಶಿಲ್ಪ ಮತ್ತು ಪ್ರತಿಮಾ ಶಾಸ್ತ್ರ, ಬಾದಾಮಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ದೇಸಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕುರುಬನಕಟ್ಟೆ