ನುಡಿಹಬ್ಬ ೨೨ – ೨೧ನೇ ಡಿಸೆಂಬರ್ ೨೦೧೩
೦೧. ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ಅವರು
ಇಂದಿನ ಉಡುಪಿ ಜಿಲ್ಲೆಯ (ಅಂದಿನ ದಕ್ಷಿಣ ಕನ್ನಡ ಜಿಲ್ಲೆ) ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ೧೯೪೦ರ ಜೂನ್ ತಿಂಗಳ ೬ನೇ ತಾರೀಖು ಜನಿಸಿದ ನ್ಯಾಯಮೂರ್ತಿ ಸಂತೋಷ ಹೆಗಡೆಯವರು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು ಜನವರಿ ೧೯೬೬ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಫೆಬ್ರವರಿ ೧೯೮೪ರಲ್ಲಿ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡರು. ಮೇ ೧೯೮೪ರಲ್ಲಿ ಹಿರಿಯ ವಕೀಲರಾಗಿ ನಿಯೋಜಿತಗೊಂಡು ಅಡ್ವೋಕೇಟ್ ಜನರಲ್ ಆಗಿ ೧೯೮೮ರವರೆಗೆ ಈ ಪದವಿಯಲ್ಲಿಯೇ ಮುಂದುವರಿದರು. ನವೆಂಬರ್ ೧೯೮೯ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಹುದ್ದೆಗೆ ನೇಮಕಗೊಂಡು ೧೧ ತಿಂಗಳ ಕಾಲ ಕಾರ್ಯ ನಿರ್ವಹಿಸಿದರು. ಕರ್ನಾಟಕದಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ೧೯೯೮ರಲ್ಲಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಹುದ್ದೆಗೆ ನೇಮಕಗೊಂಡು ಅದೇ ಹೆಗ್ಗಳಿಕೆಯನ್ನು ಮುಂದುವರಿಸಿದರು. ಇಂಥ ಒಂದು ಪ್ರತಿಷ್ಠಿತ ಹುದ್ದೆಗೆ ಅಂದಿನಿಂದ ಇಂದಿನವರೆಗೆ ಕರ್ನಾಟಕದಿಂದ ನೇಮಕಗೊಂಡ ಏಕೈಕ ವ್ಯಕ್ತಿಯಾಗಿ ಕರ್ನಾಟಕದ ಪಾಲಿಗೆ ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ೧೯೯೯ರಲ್ಲಿ ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಬಾರ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನಾಲ್ವರಲ್ಲಿ ಇವರೂ ಒಬ್ಬರು. ೨೦೦೫ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯನ್ನು ಹೊಂದಿ ಮತ್ತೆ ನವದೆಹಲಿಯಲ್ಲಿರುವ ದೂರಸಂಪರ್ಕ ವ್ಯಾಜ್ಯ ಇತ್ಯರ್ಥ ಟ್ರಿಬ್ಯೂನಲ್‌ನ ಅಧ್ಯಕ್ಷರಾಗಿ ೨೦೦೬ರಲ್ಲಿ ನಿಯೋಜಿತರಾಗಿ ಕಾರ್ಯನಿರ್ವಹಿಸಿದರು. ಆಗಸ್ಟ್ ೩, ೨೦೦೬ರಂದು ಕರ್ನಾಟಕ ಲೋಕಾಯುಕ್ತ ೧೯೮೪ರ ಕಾಯಿದೆಯಂತೆ ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ಐದು ವರ್ಷಗಳ ಕಾಲಕ್ಕೆ ನೇಮಕಗೊಂಡರು.
ಸಂತೋಷ ಹೆಗಡೆಯವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರಕಿವೆ. ಕರ್ನಾಟಕದ ಲೋಕಾಯುಕ್ತರಾಗಿ ನಾಡಿನ ನೆಲ ಜಲವನ್ನು ಕಾಳಜಿಯಿಂದ ರಕ್ಷಿಸಿದ ಹಾಗೂ ಎಚ್ಚರ ಮೂಡಿಸಿದ ಸ್ಮರಣಾರ್ಹ ಸೇವೆ ಇವರದು. ಇವರ ಅಧಿಕಾರಾವಧಿಯಲ್ಲಿ ನಾಡಿನ ಅನೇಕ ಆಡಳಿತ ಮತ್ತು ಸಾಮಾಜಿಕ ಕ್ಷೇತ್ರಗಳು ಶುದ್ಧಗೊಂಡವು. ಹೊಸ ಎಚ್ಚರವನ್ನು ಪಡೆದವು. ಕರ್ನಾಟಕ ಲೋಕಾಯುಕ್ತಕ್ಕೆ ಅಂಥ ಒಂದು ಆದರ್ಶವನ್ನು ತೋರಿದ ವ್ಯಕ್ತಿ ಇವರು. ಟೈಮ್ಸ್ ಆಫ್ ಇಂಡಿಯಾದವರು ೨೦೧೦ ಮತ್ತು ೨೦೧೧ರಲ್ಲಿ ’ವರ್ಷದ ವ್ಯಕ್ತಿ’ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ೨೦೦೬ ಮತ್ತು ೨೦೧೦ರಲ್ಲಿ ವಿಜಯ ಕರ್ನಾಟಕ ಇದೇ ಪುರಸ್ಕಾರ ನೀಡಿ ಗೌರವಿಸಿದೆ. ‘ಭ್ರಷ್ಟಾಚಾರ ವಿರೋಧಿ ಹರಿಕಾರ ಭಾರತೀಯ’ ಎಂದು ೨೦೧೦ರಲ್ಲಿ ಎನ್.ಡಿ.ಟಿ.ವಿ ಗೌರವಿಸಿದೆ. ರೋಟರಿಯವರು ಪಾಲ್ ಹ್ಯಾರಿಸ್ ಪ್ರಶಸ್ತಿ ನೀಡಿ ಸತ್ಕರಿಸಿದ್ದಾರೆ.
ನ್ಯಾಯಾಂಗ ಚೌಕಟ್ಟಿನೊಳಗೆ ಭ್ರಷ್ಟಾಚಾರದ ವಿರುದ್ಧ ನಿಷ್ಪಕ್ಷಪಾತ ಮತ್ತು ನಿಷ್ಟುರ ಕ್ರಮವಹಿಸುವ ಮೂಲಕ ಜನಸಾಮಾನ್ಯರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ ಮತ್ತು ನ್ಯಾಯಕ್ಕಾಗಿ ನಿರಂತರ ಹೋರಾಟವನ್ನು ಮುಂದುವರಿಸಿದ ಇವರಿಗೆ ೨೨ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.
೦೨. ನ್ಯಾಯಮೂರ್ತಿ ಕೋ. ಚೆನ್ನಬಸಪ್ಪ ಅವರು
ಅಂದಿನ ಮದ್ರಾಸ್ ಪ್ರಾಂತ್ಯದ ಬಳ್ಳಾರಿ ವಲಯದ (ಇಂದಿನ ಬಳ್ಳಾರಿ ಜಿಲ್ಲೆ) ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದಲ್ಲಿ ಎನ್.ವೀರಣ್ಣ ಮತ್ತು ಕೆ. ಬಸಮ್ಮ ದಂಪತಿಯರ ಪುತ್ರರಾಗಿ ೧೯೨೨ರ ಮಾರ್ಚ್ ೧ನೇ ತಾರೀಖು ಶ್ರೀ ಕೋ.ಚೆನ್ನಬಸಪ್ಪ ಜನಿಸಿದರು. ೧೯೮೯ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ೧೯೪೪ರಲ್ಲಿ ಬಿ.ಎ ಪದವಿ ಪಡೆದು ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿಯನ್ನು ೧೯೪೬ರಲ್ಲಿ ಪಡೆದರು. ೧೯೪೬ರಲ್ಲಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ ನಂತರ ೧೯೫೪ರಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯಪ್ರವೃತ್ತರಾದರು. ಕೆಲ ಕಾಲ ಬಳ್ಳಾರಿ ನ್ಯಾಯಾಲಯದಲ್ಲಿಯೂ ವಕೀಲರಾಗಿ ಸೇವೆಯನ್ನು ಸಲ್ಲಿಸಿದರು. ಸೆಷನ್ಸ್ ನ್ಯಾಯಾಧೀಶರಾಗಿ ೧೯೬೫ರಲ್ಲಿ ನೇಮಕಗೊಂಡು ೧೯೭೭ರವರೆಗೆ ವಿವಿಧ ಹಂತಗಳಲ್ಲಿ ನ್ಯಾಯಾಧೀಶರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಸ್ತುತ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕ್ರಿಯಾಶೀಲ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ೧೯೪೨ರಲ್ಲಿ ’ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಭಾಗಿಯಾಗಿ ಸೆರೆವಾಸವನ್ನೂ ಅನುಭವಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿ ಇವರು.
ಚನ್ನಬಸಪ್ಪನವರು ಸಾಹಿತಿಯಾಗಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅದ್ವಿತೀಯ ಕೃಷಿಯನ್ನು ಮಾಡಿದವರು. ಇದುವರೆಗೆ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ಕಾದಂಬರಿ, ಸಣ್ಣಕತೆ, ನಾಟಕ, ಆತ್ಮಕಥೆ, ವಿಮರ್ಶೆ, ಅನುವಾದ ಮುಂತಾಗಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರಮುಖರಲ್ಲಿ ಒಬ್ಬರು. ರಾಷ್ಟ್ರಕವಿ ಕುವೆಂಪು ಅವರ ಆತ್ಮೀಯ ಒಡನಾಟವೂ ಇವರಿಗಿತ್ತು.
ಬಳ್ಳಾರಿಯ ಸಾಹಿತ್ಯ ಅಕಾಡೆಮಿಯ ಸಂಸ್ಥಾಪಕ. ಇವರು ೩೮ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ, ಕರ್ನಾಟಕದ ಪ್ರಗತಿಪರ ಬರಹಗಾರರ ಸಮ್ಮೇಳನದ ಉದ್ಘಾಟಕ. ಇವರು ಅನೇಕ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ವಯಸ್ಕರ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಬಳ್ಳಾರಿಯ ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮತ್ತು ಸಲಹೆಗಾರ. ಅನೇಕ ಸಂಘ ಸಂಸ್ಥೆಗಳ ಸೇವೆಯನ್ನೂ ಮಾಡಿದ್ದಾರೆ. ಇಂಗ್ಲಿಷ್, ಕನ್ನಡ, ಹಿಂದಿ, ತೆಲಗು, ಬೆಂಗಾಲಿ ಮುಂತಾದ ಅನೇಕ ಭಾಷೆಗಳನ್ನು ಬಲವರಾಗಿದ್ದು ಅನುವಾದ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಕರ್ನಾಟಕದ ಏಕೀಕರಣದಲ್ಲಿ ಮಹತ್ತರ ಪಾತ್ರ ವಹಿಸಿದ ಚೆನ್ನಬಸಪ್ಪನವರು ಇಂದಿಗೂ ನಾಡು, ನುಡಿಯ ರಕ್ಷಣೆಗಾಗಿ ಕಟ್ಟಿದವರು ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಬಗೆಗೆ ವಿಶೇಷ ಆಸಕ್ತಿವಹಿಸಿ ಕನ್ನಡದಲ್ಲಿ ತೀರ್ಪುಗಳನ್ನು ಬರೆದದ್ದು ಇವರ ಕನ್ನಡಾಭಿಮಾನಕ್ಕೆ ಸಾಕ್ಷಿ. ಹೀಗೆ ಕನ್ನಡ ತೇರು ಎಳೆಯುತ್ತಲೇ ನ್ಯಾಯಾಲಯದ ಸೇವೆಯನ್ನು ಹೊಂದಿದ ಚೆನ್ನಬಸಪ್ಪನವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾಗಿ ಅನೇಕ ಗೌರವ ಪ್ರಶಸ್ತಿಗಳು ಲಭಿಸಿವೆ. ಶ್ರೀಯುತರಿಗೆ ೨೨ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.
೦೩. ಶ್ರೀ ಎಸ್.ಕೆ.ಶಿವಕುಮಾರ್ ಅವರು
ಕನ್ನಡಿಗರಾದ ಶ್ರೀ ಎಸ್.ಕೆ.ಶಿವಕುಮಾರ್ ಅವರು ಇಂಡಿಯನ್ ಇನ್ಸ್‌ಟಿಟ್ಯೂಟ್‌ನ ಪದವೀಧರರಾಗಿ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಪ್ರಖ್ಯಾತ ವಿಜ್ಞಾನಿಯಾಗಿ, ಕೇಂದ್ರದ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಸ್ರೋ ಬಾಹ್ಯಾಕಾಶ ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ ಶ್ರೀ ಶಿವಕುಮಾರ್ ಅವರು ಇಸ್ರೋದ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ನ (ಇಸ್ಟ್ರಾರ್) ನಿರ್ದೇಶಕರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಸಂಸ್ಥೆಯು ಭಾರತದ ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಕಾರ್ಯನಿರ್ವಹಣೆ ಮತ್ತು ಅವುಗಳನ್ನು ಸರಿಯಾದ ಕಕ್ಷೆಯಲ್ಲಿರಿಸುವ ಕಾರ್ಯವನ್ನು ವಿಶ್ವದಾದ್ಯಂತ ಇರುವ ಅನೇಕ ಬಾಹ್ಯಾಕಾಶ ಭೂ ನಿಲ್ದಾಣಗಳ ಮೂಲಕ ನಿಯಂತ್ರಿಸುವ ಕೆಲಸ ಮತ್ತು ಉಪಗ್ರಹಗಳ ನಿಯಂತ್ರಣವನ್ನು ಮಾಡುತ್ತದೆ. ಇದರೊಂದಿಗೆ ರಾದಾರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಭಾರತದ ಉಪಗ್ರಹ ಉಡಾವಣ ಜಾದೀಕರಣವನ್ನು ಮಾಡುತ್ತಿದೆ. ಈ ಎಲ್ಲದರ ಹಿಂದೆ ನಮ್ಮ ಕನ್ನಡದ ವಿಜ್ಞಾನಿ ಶಿವಕುಮಾರ ಶ್ರಮವಿದೆ.
ಭಾರತದ ಪ್ರಥಮ ಬಾಹ್ಯಾಕಾಶ ನೆಟ್‌ವರ್ಕ್ ಆಂಟೆನಾಗೆ ಸಂಬಂಧಿಸಿದಂತೆ ೩೨ ಮೀಟರ್ (೧೦೦ ಅಡಿ) ವ್ಯಾಸದ ಬೃಹತ್ ಆಂಟೆನಾವನ್ನು ಅಭಿವೃದ್ಧಿಪಡಿಸುವಲ್ಲಿ ಯೋಜನೆಯ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಭಾರತದ ಪ್ರಥಮ ಚಂದ್ರನ ಯಾತ್ರೆಗೆ ಸಂಬಂಧಿಸಿದ ಚಂದ್ರಯಾನದ ಯೋಜನೆಯಲ್ಲಿ ಈ ಆಂಟೆನಾವು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಭಾರತದ ಅನೇಕ ಬಾಹ್ಯಾಕಾಶ ಯೋಜನೆಗೆ ಸಂಬಂಧಿಸಿದ ಕೆಲಸಗಳಲ್ಲಿ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸುತ್ತಲಿದೆ. ಚಂದ್ರಯಾನ ಯೋಜನೆಗೆ ಸಂಬಂಧಿಸಿದಂತೆ ಅದರ ಸಂಪೂರ್ಣ ಭೂ ನಿಲ್ದಾಣ ಕೇಂದ್ರದಿಂಧ ನಿಯಂತ್ರಿಸುವ ಜವಾಬ್ದಾರಿಯನ್ನು ಇವರ ನೇತೃತ್ವದಲ್ಲಿನ ತಂಡವು ನಿರ್ವಹಿಸಿತು. ಇವರು ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿ ಭಾಸ್ಕರ, ಆಪಲ್, ಐಆರ್‌ಎಸ್ ಮತ್ತು ಇನ್‌ಸ್ಯಾಟ್ ಮುಂತಾದ ಉಪಗ್ರಹಗಳಿಗೆ ಸಂಬಂಧಿಸಿದಂತೆ ಮಿಷನ್ ಪ್ಲಾನಿಂಗ್ ಅನಾಲಿಸಿಸ್ ಮತ್ತು ಆಪರೇಷನ್ಸ್‌ನಂತಹ ಮಹತ್ತರ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಉಪಗ್ರಹಗಳಾದ ಐಆರ-೧ಬಿ ಮತ್ತು ಐಆರ್-೧ಸಿ ಯೋಜಯ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವರು. ಎರಡೂ ಉಪಗ್ರಹಗಳು ಒಂದು ದಶಕಗಳ ಕಾಲ ಕಕ್ಷೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ೧೯೭೮ ರಿಂದ ೧೯೯೮ರವರೆಗೆ ಬಾಹ್ಯಾಕಾಶ ಕೇಂದ್ರದ ಅನೇಕ ಹುದ್ದೆಗಳನ್ನು ಅಲಂಕರಿಸುವ ಮೂಲಕ ಕರ್ನಾಟಕಕ್ಕೆ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮಿತಿಗಳಲ್ಲಿ ಭಾರತದ ಬಾಹ್ಯಾಕಾಶ ಕೇಂದ್ರವನ್ನು ಪ್ರತಿನಿಧಿಸಿರುವ ಇವರು ವಿಶ್ವಸಂಸ್ಥೆ ಮತ್ತು ಇತರೆ ವಿಶ್ವದ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ. ದೇಶದ ಮತ್ತು ವಿದೇಶದ ಪ್ರತಿಷ್ಟಿತ ಸಂಘ ಸಂಸ್ಥೆಗಳ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ೨೦೦೮ರಲ್ಲಿ ಪಡೆದರು. ಹಂಸರತ್ನ, ನ್ಯಾಷನಲ್ ಏರೋನಾಟಿಕ್ಸ್ ಬಹುಮಾನದಿಂದ ಪುರಸ್ಕೃತರು. ಚಂದ್ರಯಾನ ಯೋಜನೆಗೆ ಇವರು ನೀಡಿದ ಕೊಡುಗೆಗೆ ಅವರನ್ನು ಇಂಟರ್‌ನ್ಯಾಷನಲ್ ಆಸ್ಟ್ರೋ ಅಕಾಡೆಮಿಯ ವಿದ್ವಾಂಸರೆಂದು ಆಯ್ಕೆ ಮಾಡಲಾಯಿತು. ಟೆಲಿಮೆದಿಸಲ್ ಯೋಜನೆಚಿi ಯಶಸ್ವಿ ಅನುಷ್ಠಾನಕ್ಕಾಗಿ ಅವರಿಗೆ ’ಟೀಮ್ ಎಕ್ಸಲೆನ್ಸ್’ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದ ೯೨ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್(ಡಿ.ಎಸ್‌ಸಿ) ಪದವಿಯನ್ನು ನೀಡಿ ಗೌರವಿಸಿದೆ.
ಭಾರತದ ಬಾಹ್ಯಾಕಾಶ ಯೋಜನೆಗೆ ಸಂಬಂಧಿಸಿದಂತೆ ಉಪಗ್ರಹಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ತೊಡಗಿಕೊಂಡಿರುವ ೨೫೦೦ಕ್ಕೂ ಅಧಿಕ ಎಂಜೆನಿಯರ್‌ಗಳು ಮತ್ತು ವಿಜ್ಞಾನಿಗಳ ತಂಡದ ನೇತೃತ್ವವನ್ನು ಶಿವಕುಮಾರ್ ವಹಿಸಿದ್ದರು. ಬಾಹ್ಯಾಕಾಶದಲ್ಲಿ ಸ್ವಾಯತ್ತತೆ ಮತ್ತು ಬೃಹತ್ ಆಂಟೆನಾಗಳ ರಚನೆ ಮತ್ತು ಅಭಿವೃದ್ಧಿಪಡಿಸುವುದು ಅವರ ಪ್ರಸ್ತುತದ ಆಸಕ್ತಿಯ ಕ್ಷೇತ್ರವಾಗಿದೆ. ಶ್ರೀಯುತರಿಗೆ ೨೨ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.