ನುಡಿಹಬ್ಬ ೨೩ – ೬ನೇ ಮಾರ್ಚ್ ೨೦೧೫
೦೧. ಡಾ. ಪಿ.ಎಸ್. ಶಂಕರ್ ಅವರು
ಕರ್ನಾಟಕದ ಪ್ರಸಿದ್ಧ ವೈದ್ಯರು ಹಾಗೂ ಕನ್ನಡದಲ್ಲಿ ವೈದ್ಯ ಸಾಹಿತ್ಯ ಬರಹಗಾರರೂ ಆದ ಡಾ.ಪಿ.ಎಸ್.ಶಂಕರ್ ಅವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ. ೧.೧.೧೯೩೬ರಲ್ಲಿ ಜನಿಸಿದ ಇವರು ಚಿತ್ರದುರ್ಗದಲ್ಲಿ ಪ್ರೌಢಶಾಲೆ ಮುಗಿಸಿ ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಆನಂತರದ ಅವರ ಕಾರ್ಯಕ್ಷೇತ್ರ ಕಲಬುರಗಿ. ಕಲಬುರಗಿಯಲ್ಲಿ ಐದು ದಶಕಗಳಿಂದ ವಾಸ ಮಾಡುತ್ತಿರುವ ಡಾ.ಪಿ.ಎಸ್.ಶಂಕರ್ ಇದುವರೆಗೆ ೮೦ ಗ್ರಂಥಗಳನ್ನು ಬರೆದಿದ್ದಾರೆ. ಆರು ಅನುವಾದಗಳನ್ನು ಪ್ರಕಟಿಸಿದ್ದಾರೆ. ಆರು ಸಂಪಾದನೆ ಕೃತಿಗಳು ಹೊರಬಂದಿವೆ. ವೈದ್ಯ ಸಾಹಿತ್ಯವನ್ನು ಕುರಿತು ಅವರು ಬರೆದ ಕನ್ನಡದ ಲೇಖನಗಳ ಸಂಖ್ಯೆಯೇ ಸುಮಾರು ಒಂದು ಸಾವಿರವನ್ನು ದಾಟುತ್ತವೆ. ಕನ್ನಡ ವಿಶ್ವವಿದ್ಯಾಲಯವು ೧೯೯೫ರಷ್ಟು ಹಿಂದೆಯೇ ಇವರ ಸಂಪಾದಕತ್ವದ ವೈದ್ಯ ವಿಶ್ವಕೋಶವನ್ನು ಪ್ರಕಟಿಸಿದೆ. ಬಹುಶಃ ವೈದ್ಯ ವಿಜ್ಞಾನವನ್ನು ಕುರಿತಂತೆ ಕನ್ನಡದಲ್ಲಿ ಡಾ.ಶಂಕರ್ ಬರೆದಷ್ಟು ಲೇಖನಗಳನ್ನು ಬಹುಶಃ ಯಾರೂ ಬರೆದಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ೨೮ ಕೃತಿಗಳು, ವಿವಿಧ ಖಾಯಿಲೆಗಳಿಗೆ ಸಂಬಂಧಿಸಿದ ೧೩ ಕೃತಿಗಳು, ದೇಹದ ಪರಿಚಯವನ್ನು ಕುರಿತ ಏಳು ಕೃತಿಗಳು, ಮಕ್ಕಳ ಆರೋಗ್ಯ ಮತ್ತು ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಆರು ಕೃತಿಗಳನ್ನು ಇವರು ಹೊರತಂದಿದ್ದಾರೆ. ಇವರು ಹೊರತಂದಿರುವ ಮೆಡಿಕಲ್ ಶಬ್ದಕೋಶ(ಮೆಡಿಕಲ್ ಡಿಕ್ಸನರಿ) ಅಪಾರ ಜನಮನ್ನಣೆಯನ್ನು ಪಡೆದಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿದೆ. ಶಂಕರ್ ಅವರ ಬರವಣಿಗೆಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಶ್ರೇಷ್ಠ ವಿಜ್ಞಾನ ಸಂವಹನಕಾರ ಎಂಬ ಗೌರವ, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಮೈಸೂರಿನ ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನುಡಿಸಿರಿ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಮೈಸೂರು, ಬೆಂಗಳೂರು, ಕರ್ನಾಟಕ, ಗುಲಬರ್ಗಾ, ಕೃಷಿ ಹಾಗೂ ಕನ್ನಡ ವಿಶ್ವವಿದ್ಯಾಲಯಗಳು ಇವರ ಗ್ರಂಥಗಳನ್ನು ಪ್ರಕಟಿಸಿವೆ. ಇಷ್ಟಲ್ಲದೆ ಡಾ.ಶಂಕರ್ ಅವರು ವಚನಗಳನ್ನು ಅಭ್ಯಸಿಸಿ ಅದರಲ್ಲಿ ವಿಜ್ಞಾನ ಮತ್ತು ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಚಯಿಸುವ ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿರುವುದು ಅವರ ವಿಶೇಷ. ಅವರು ಇಂಗ್ಲಿಷ್‌ನಲ್ಲಿ ಎಪ್ಪತ್ತಕ್ಕೂ ಮೇಲ್ಪಟ್ಟು ಕೃತಿಗಳನ್ನು ರಚಿಸಿದ್ದು, ಆ ಬರಹಗಳು ವೈದ್ಯ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿವೆ. ಡಾ. ಶಂಕರ್ ಅವರು ದೇಶ ವಿದೇಶಗಳ ನಾನಾ ಉನ್ನತ ಸಲಹಾ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯ ವಿಜ್ಞಾನ ಕಾಲೇಜಿನ ವಿಭಾಗ ಮುಖ್ಯಸ್ಥರಾಗಿ, ಡೀನರಾಗಿ, ನಿರ್ದೇಶಕರಾಗಿ, ಶಿಕ್ಷಣ ಸಲಹೆಗಾರರಾಗಿಯೂ ಇವರ ಸೇವೆ ಅಭಿನಂದನಾರ್ಹವಾದುದು. ದೇಶ ವಿದೇಶಗಳ ವಿಚಾರಸಂಕಿರಣಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ ಪ್ರಾಜ್ಞತೆ ಇವರದು. ವಿದೇಶಗಳಲ್ಲಿನ ಆರು ವೈದ್ಯಕೀಯ ಸಂಸ್ಥೆಗಳಲ್ಲಿ ಹದಿಮೂರು ಪ್ರತಿಷ್ಠಿತ ದೇಶದ ವೈದ್ಯಕೀಯ ಸಂಸ್ಥೆಗಳಲ್ಲಿ ಇವರನ್ನು ’ಫೆಲೋ’ ಎಂದು ನಾಮಕರಣ ಮಾಡಲಾಗಿದೆ. ತಮ್ಮ ಈ ದೀರ್ಘಾನುಭವವನ್ನು ಬಳಸಿಕೊಂಡು ಕನ್ನಡದಲ್ಲಿ ವೈದ್ಯಕೀಯ ಜ್ಞಾನವನ್ನು ಉಣಬಡಿಸುವ ಪ್ರಯತ್ನ ಮಾಡಿದ್ದು ಸ್ತುತ್ಯರ್ಹವಾದುದು. ಶ್ರೀಯುತರಿಗೆ ೨೩ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.
೦೨. ಪ್ರೊ. ಎಂ.ಎಚ್. ಕೃಷ್ಣಯ್ಯ ಅವರು
ಕನ್ನಡದ ಪ್ರಸಿದ್ಧ ವಿಮರ್ಶಕರು ಹಾಗೂ ಕಲಾ ಜಗತ್ತಿನ ವಿಶ್ಲೇಷಕರೂ ಆದ ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ೨೧.೭.೧೯೩೭ ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಹಂತದಿಂದ ಎಂ.ಎ. ಅಧ್ಯಯನದವರೆಗೆ ಮೈಸೂರಿನಲ್ಲಿಯೇ ಇವರ ವಿದ್ಯಾಭ್ಯಾಸ. ಮಹಾರಾಜ ಕಾಲೇಜಿನಲ್ಲಿ ಶ್ರೇಷ್ಠ ವಿದ್ವಾಂಸರಾದ ಪ್ರೊ.ತೀ.ನಂ.ಶ್ರೀಕಂಠಯ್ಯ, ಪ್ರೊ. ಡಿ.ಎಲ್.ನರಸಿಂಹಾಚಾರ್. ತ.ಸು.ಶಾಮರಾವ್ ಇಂತಹ ಮಹನಿಯರು ಇವರಿಗೆ ಅಧ್ಯಾಪಕರಾಗಿದ್ದು ಒಂದು ವಿಶೇಷ. ೧೯೫೯ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡ ಎಂ.ಎಚ್. ಕೃಷ್ಣಯ್ಯನವರು ಆನಂತರ ಕರ್ನಾಟಕದಾದ್ಯಂತ ಇರುವ ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ, ರೀಡರ್ ಮತ್ತು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ೧೯೯೫ರಲ್ಲಿ ನಿವೃತ್ತಿಗೊಂಡರು. ಕೃಷ್ಣಯ್ಯನವರ ವಿಶೇಷವೆಂದರೆ ಅವರೊಬ್ಬ ಅತ್ಯಂತ ಜನಪ್ರಿಯ ಅಧ್ಯಾಪಕ ಎಂಬುದು. ನಾಡಿನಾದ್ಯಂತ ಸಾವಿರಾರು ವಿದ್ಯಾರ್ಥಿಗಳ ಜನಪ್ರಿಯ ’ಕನ್ನಡ ಮೇಸ್ಟ್ರು’ ಎಂಬ ಹೆಗ್ಗಳಿಕೆ ಇವರಿಗಿದೆ. ಕಾವ್ಯ ಭಾಷೆ, ಆಲೋಕನ, ಶೃಂಗಾರ ಲಹರಿ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ, ಕಲಾಸಂಸ್ಕೃತಿ ಇವರ ಮುಖ್ಯ ಕೃತಿಗಳಾದರೆ, ಸಾಲುದೀಪಗಳು, ಕರ್ನಾಟಕ ಕಲಾ ದರ್ಶನ, ಕುವೆಂಪು ಸಾಹಿತ್ಯ ಚಿತ್ರಸಂಪುಟ, ಆರ್.ಎಸ್.ಎನ್ ವ್ಯಕ್ತಿ ಮತ್ತು ಕಲೆ, ಕಲೆ ಮತ್ತು ರಸಸ್ವಾದನೆ, ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇವರ ಸಂಪಾದಿತ ಕೃತಿಗಳು. ಸುಮಾರು ೧೫ಕ್ಕೂ ಹೆಚ್ಚು ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಇವರ ಕೃತಿಗಳು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಇವರು ಮಾಡಿದ ಸಾಧನೆ ಅನನ್ಯವಾದದ್ದು. ಅಕಾಡೆಮಿಯ ಜಾಲತಾಣ ತೆರೆದು ಕನ್ನಡ ಸಾಹಿತಿಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ಸಿಗುವಂತೆ ಮಾಡಿದ ಕೀರ್ತಿ ಇವರದು. ’ಸ್ವಂತ ಕವಿತೆ ಓದು’ ಎಂಬ ವಿಶೇಷ ಯೋಜನೆ ರೂಪಿಸಿ ಬಹುಮಾಧ್ಯಮದಲ್ಲಿ, ಅಂತರ್ಜಾಲದಲ್ಲಿ ನೋಡುವ ಮತ್ತು ಕೇಳುವ ಅವಕಾಶವನ್ನು ಇವರು ಕಲ್ಪಿಸಿದರು. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಸಿಂಡಿಕೇಟ್ ಸದಸ್ಯರಲ್ಲಿ ಇವರೂ ಒಬ್ಬರು. ಕನ್ನಡ ಪುಸ್ತಕ ಪ್ರಾಧಿಕಾರ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಮುಂತಾದ ಸಂಸ್ಥೆಗಳ ಸದಸ್ಯರಾಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಕುವೆಂಪು ಪ್ರಶಸ್ತಿಗಳ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳೆರಡನ್ನು ಸಮರ್ಥವಾಗಿ ಅರ್ಥೈಸಬಲ್ಲ ಪ್ರೊ. ಕೃಷ್ಣಯ್ಯನವರು ಒಬ್ಬ ಅತ್ಯುತ್ತಮ ವಾಗ್ಮಿ. ಚಿತ್ರಕಲೆಯ ವಿವಿಧ ಆಯಾಮಗಳನ್ನು ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಇವರು ಕನ್ನಡದ ವಿರಳ ಕಲಾ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ. ಶ್ರೀಯುತರಿಗೆ ೨೩ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸುತ್ತಿದೆ.
೦೩. ಶ್ರೀ ಎಸ್. ಆರ್. ರಾಮಸ್ವಾಮಿ ಅವರು
ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್.ಆರ್.ರಾಮಸ್ವಾಮಿಯವರು ೧೯೭೯ರಿಂದ ಉತ್ಥಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ೧೯೭೨-೭೯ರ ಅವಧಿಯಲ್ಲಿ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಭಕ್ತಿ ಮತ್ತು ಸಮಾಜ ಪ್ರೇಮವನ್ನು ತಮ್ಮ ಜೀವನದ ಮೂಲಧಾತುವನ್ನಾಗಿ ಮಾಡಿಕೊಂಡ ಎಸ್.ಆರ್.ರಾಮಸ್ವಾಮಿಯವರು ಸರಳತೆಯೇ ಮೈವೆತ್ತಂತಿರುವ ಒಬ್ಬ ಪ್ರಾಮಾಣಿಕ ಚಿಂತಕ. ಭಾರತದ ಮತ್ತು ಕರ್ನಾಟಕದ ಮಹತ್ವದ ವ್ಯಕ್ತಿಗಳನ್ನು ಕುರಿತು ಇವರು ಬರೆದಿರುವ ಜೀವನ ಚರಿತ್ರೆಗಳು ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ವಿಶಿಷ್ಟ ಕಾಣಿಕೆಗಳಾಗಿವೆ. ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ’ಕೋಲ್ಮಿಂಚು](೧೯೯೬) ಜಯಪ್ರಕಾಶ್ ನಾರಾಯಣ್ (೨೦೦೦), ವಲ್ಲಭಭಾಯಿ ಪಟೇಲ್ (೨೦೦೦), ಮೋಕ್ಷಗುಂಡಂ ವಿಶ್ವೇಶ್ವರಯ್ಯ(೨೦೦೦) ಮೊದಲಾದ ಹನ್ನೆರಡು ಜೀವನಚರಿತ್ರೆಗಳೂ ಸೇರಿದಂತೆ ಸುಮಾರು ಐವತ್ತು ಗ್ರಂಥಗಳನ್ನು ಬರೆದಿದ್ದಾರೆ. ’ಭಾರತದಲ್ಲಿ ಸಮಾಜಕಾರ್ಯ’ (೧೯೯೨), ’ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’(೧೯೯೭) ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನೆ ಮಾಡಿದ್ದಾರೆ. ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ’ಆರ್ಥಿಕತೆಯ ಎರಡು ಧ್ರುವ’(೧೯೯೪) ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ’ಶತಮಾನದ ತಿರುವಿನಲ್ಲಿ ಭಾರತ’(೧೯೮೯) ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ತಂದಿದ್ದಾರೆ.
ಅನೇಕ ಹಿರಿಯ ಸಾಹಿತಿಗಳ ಒಟನಾಟದಲ್ಲಿದ್ದ ರಾಮಸ್ವಾಮಿಯವರು ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ, ರಾಳ್ಲಪಲ್ಲಿ ಅನಂತಕೃಷ್ಠಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ ಮೊದಲಾದ ಧೀಮಂತರನ್ನು ಕುರಿತು ಬರೆದ ವ್ಯಕ್ತಿಚಿತ್ರಮಾಲೆ ’ದೀವಟಿಗೆಗಳು’(೧೯೯೮) ಒಂದು ಅನುಪಮ ಕೃತಿಯೆನಿಸಿದೆ. ಇತ್ತೀಚಿನ (೨೦೧೧) ’ದೀಪ್ತಿಮಂತರು’ ವ್ಯಕ್ತಿಚಿತ್ರ ಸಂಕಲನದಲ್ಲಿ ಧೀಮಂತ ಪತ್ರಕರ್ತ ತಿ.ತಾ.ಶರ್ಮ, ’ತೋಟಗಾರಿಕೆ ಋಷಿ’ ಎಂ.ಎಚ್.ಮರಿಗೌಡ ಮೊದಲಾದ ಆರು ಮಂದಿ ಸಾಧಕರನ್ನು ಪರಿಚಯಿಸಿದ್ದಾರೆ.
ರಾಮಸ್ವಾಮಿಯವರು ಕಳೆದ ಐವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ೧೦೦೦ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಸೋಲಿಗರನ್ನು ಕುರಿತು ಇವರು ಬರೆದ ಲೇಖನಕ್ಕೂ (೧೯೮೩), ಭೂಸುಧಾರಣೆ ಕುರಿತ ಲೇಖನಕ್ಕೂ(೧೯೮೪) ಗ್ರಾಮೀಣ ಬರಹ ಪುರಸ್ಕಾರ ಯೋಜನೆಯಲ್ಲಿ ಕೆನರಾ ಬ್ಯಾಂಕಿನಿಂದ ಪ್ರಥಮ ಬಹುಮಾನ ದೊರೆತಿದೆ. ಸಾಹಿತ್ಯ ಸೇವೆಗಾಗಿ ೨೦೦೮ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಇವರಿಗೆ ದೊರೆತಿದೆ. ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯಿಂದ ೨೦೧೦ರ ವರ್ಷದ ವ್ಯಕ್ತಿ ಪ್ರಶಸ್ತಿ ದೊರೆತಿದೆ. ಇವರ ಸೇವೆಯನ್ನು ಪರಿಗಣಿಸಿ ಮಿಥಿಕ್ ಸೊಸೈಟಿಯು ಶತಮಾನೋತ್ಸವ ಪ್ರಶಸ್ತಿ ನೀಡಿದೆ. ಶ್ರೀಯುತರಿಗೆ ೨೩ನೇ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.