ನುಡಿಹಬ್ಬ ೯ – ೨ನೇ ಫೆಬ್ರವರಿ ೨೦೦೧

ನಾಡೋಜರ ಪರಿಚಯ : 

೧. ಡಾ.ಯು.ಆರ್.ರಾವ್ ಅವರು 

Image result for ಡಾ.ಯು.ಆರ್.ರಾವ್    nudihabba 9 (6)

ಉಡುಪಿ ರಾಮಚಂದ್ರರಾವ್ ಭಾರತದ ಖ್ಯಾತ ವಿಜ್ಞಾನಿಗಳ ಸಾಲಿಗೆ ಸೇರಿದ ಕನ್ನಡಿಗರು. ೧೯೩೨ರ ಮಾರ್ಚ್ ೧೦ರಂದು ಜನಿಸಿದ ಯು.ಆರ್.ರಾವ್ ಅವರು ರಿಕ್ತ ಸ್ಥಿತಿಯಲ್ಲಿದ್ದ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದರು. ಬಳ್ಳಾರಿ, ಉಡುಪಿಗಳಲ್ಲಿ ಮೊದಲ ಹಂತದ ವಿದ್ಯಾಭ್ಯಾಸ ಮುಗಿಸಿದರು. ಅನಂತರ ಮದರಾಸು ಮತ್ತು ಬನಾರಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆದರು. ೧೯೬೦ರಲ್ಲಿ ಗುಜರಾಥ್ ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿ ಪಡೆದರು ಆ ಹೊತ್ತಿಗೆ ಭಾರತದ ವಿಜ್ಞಾನಕ್ಕೆ ಮುಂಚೂಣಿಯಲ್ಲಿದ್ದ ವಿಕ್ರಮ್ ಸಾರಾಭಾಯ್ ಮತ್ತು ಹೋಮಿ ಜೆ ಬಾಬಾ ಅವರಿಗೆ ಪರಿಚಿತರಾದರು. ರಾವ್ ಅವರ ಪ್ರತಿಭೆ ಈ ವಿಜ್ಞಾನಿಗಳಿಗೆ ಮನವರಿಕೆಯಾಯಿತು. ಸಾರಾಭಾಯ್ ಅವರ ನೀಲಿಗಣ್ಣಿನ ಹುಡುಗರಾದರು.

ಬಾಹ್ಯಾಕಾಶ ತಂತ್ರಜ್ಞಾನ ಕುಡಿಯೊಡೆಯುತ್ತಿದ್ದ ಕಾಲದಲ್ಲಿ ಅದನ್ನು ಸಮಾಜಕ್ಕೆ ಉಪಯೋಗವಾಗುವಂತೆ ಬಳಸುವ ಹೊಣೆಗಾರಿಕೆಯನ್ನು ವಿಕ್ರಮ್ ಸಾರಾಭಾಯ್ ಅವರು ಯು.ಆರ್.ರಾವ್ ಅವರಿಗೆ ವಹಿಸಿದರೂ, ದೂರ ಸಂವೇದಿ ಉಪಗ್ರಹಗಳ ಮೂಲಕ ಭಾರತದ ಭೂಖನಿಜ, ಜಲಸಂಪತ್ತು, ವಾತಾವರಣ, ಬೆಳೆ ಮುಂತಾದ ಬೃಹದ್ ಪ್ರಮಾಣದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ರೂಪಿಸಿದ ಶ್ರೇಯಸ್ಸು ಡಾ.ಯು.ಆರ್.ರಾವ್ ಅವರಿಗೆ ಸಲ್ಲುತ್ತದೆ.

ಬಾಹ್ಯಾಕಾಶ ಶೋಧನೆಯಿಂದ ಪಡೆದ ಮಾಹಿತಿ ಕೇವಲ ಮಾಹಿತಿಗಾಗಿ ಉಳಿದಿಲ್ಲ. ಜನಜೀವನವನ್ನು ನಿಯಂತ್ರಿಸುವ ಹತ್ತಾರು ಪ್ರಾಕೃತಿಕ ಶಕ್ತಿಗಳನ್ನು, ಅವುಗಳ ಚಲನಶೀಲತೆಯನ್ನು ಈಗ ಮುಂದಾಗಿ ಕರಾರುವಕ್ಕಾಗಿ ಅರಿಯುವುದು ಸಾಧ್ಯ. ಚಂಡಮಾರುತ, ಪ್ರವಾಹ, ಬರ, ತಾಪಮಾನದ ವರಸೆಗಳು ಈ ಸಂದರ್ಭದ ಮಾಹಿತಿಗಳಿಗಾಗಿ ಮೊದಲೇ ತಿಳಿದು, ಅದಕ್ಕೆ ತಕ್ಕಂತೆ ಸೂಕ್ತ ಯೋಜನೆಗಳನ್ನು ರೂಪಿಸುವುದಕ್ಕೆ ಈಗ ಅವಕಾಶಗಳು ಎಂದಿಗಿಂತ ಹೆಚ್ಚಾಗಿವೆ. ಜನಮನವನ್ನು ಹಸನುಗೊಳಿಸಲು ವಿಜ್ಞಾನ, ತಂತ್ರಜ್ಞಾನಗಳು ಇರಬೇಕೆಂಬುದು ಡಾ.ರಾವ್. ಅವರ ಶೋಧ ಯೋಜನೆಗಳ ಹಿಂದೆ ನೆಲೆಗೊಂಡಿದೆ.

ಭಾರತವ್ಯಾಪಿಯಾಗಿ ಸಮಾಜಮುಖಿ ತಂತ್ರಜ್ಞಾನವನ್ನು ರೂಪಿಸುತ್ತಲೇ ಜಗತ್ತಿನ ವಿವಿಧ ದೇಶಗಳ ಸಹಯೋಗದಿಂದ ಅತ್ಯುತ್ಕೃಷ್ಟ ಬಾಹ್ಯಾಕಾಶ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಯು.ಆರ್.ರಾವ್ ಅವರಿಗೆ ದೇಶ, ವಿದೇಶಗಳಲ್ಲಿ ಸಂದಿರುವ ಪದವಿ ಪ್ರಶಸ್ತಿಗಳು ಅಪಾರ ಸಂಖ್ಯೆಯಲ್ಲಿವೆ. ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ನಿವೃತ್ತಿಯೆಂಬುದೊಂದು ಇಲ್ಲವೆಂಬಂತೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕನ್ನಡದ ಹೆಮ್ಮೆಯನ್ನು ಗಡಿದಾಟಿಸಿ ಮೇರೆಗಳಿಲ್ಲದಂತೆ ಬೆಳೆದು ನಿಂತ ಡಾ.ಯು.ಆರ್.ರಾವ್ ಅವರಿಗೆ ಕನ್ನಡ ವಿಶ್ವವಿದ್ಯಾಲಯವು “ನಾಡೋಜ” ಗೌರವ ಪದವಿಯನ್ನು ನೀಡಿ ಗೌರವಿಸುತ್ತಿದೆ.

 

೨. ಡಾ.ಭೀಮಸೇನ ಜೋಶಿ ಅವರು

Image result for bhimsen joshi images      nudihabba 13 (4)

ಕಳೆದ ಆರು ದಶಕಗಳಿಂದ ಸಂಗೀತ ವಿದ್ಯಾರಣ್ಯದ ದಿಗ್ಗಜರಾಗಿ ಬೆಳೆದ ಪಂಡಿತ ಭೀಮಸೇನ ಜೋಶಿ ಅವರದು ದೈತ್ಯ ಪ್ರತಿಭೆ. ಹಿಂದುಸ್ತಾನಿ ಸಂಗೀತೇತಿಹಾಸದಲ್ಲಿ ಅವರ ಸಾಧನೆ ಚಿರಸ್ಥಾಯಿ. ಭೀಮಸೇನ ಜೋಶಿ ಗದುಗಿನವರು. ಫೆಬ್ರ್ರುವರಿ ೧೪, ೧೯೨೨ರಲ್ಲಿ ಜನನ.

ಚಿಕ್ಕಂದಿನಿಂದ ಸಂಗೀತದ ಕಡೆಗೆ ಒಲವು ತೋರಿದ ಭೀಮಸೇನ ಜೋಶಿಯವರಿಗೆ ೧೧ ವರ್ಷದವರಿರುವಾಗ ಕುಂದಗೋಳದಲ್ಲಿ ಸವಾಯಿ ಗಂಧರ್ವರ ಗಾಯನ ಕೇಳುವ ಅವಕಾಶ ದೊರಕಿತು. ಅವರನ್ನು ಗುರುವಾಗಿ ಮಾಡಿಕೊಂಡು, ಐದು ವರ್ಷ ಅವರಲ್ಲಿ ಕಠಿಣತಮ ಅಭ್ಯಾಸ ಪೂರೈಸಿದರು. ಗುರು ಕಲಿಸಿದ್ದು ಮೂರೇ ರಾಗಗಳು. ಪ್ರಾತಃಕಾಲದ ತೋಡಿ, ಮಧ್ಯಾಹ್ನದ ಮುಲ್ತಾನಿ, ಸಾಯಂಕಾಲದ ಪೂರಿಯಾ. ಮೂರರಿಂದ ನೂರು ರಾಗಗಳಿಗೆ ರಹದಾರಿ. ಅಲ್ಲಿಂದ ಸೀಮೋಲ್ಲಂಘನ. ದೇಶ, ವಿದೇಶಗಳಲ್ಲಿ ದಿಗ್ವಿಜಯ. ಅದೆಷ್ಟು ಸಾವಿರ ಕಚೇರಿಗಳೋ, ಭೀಮಸೇನ ಜೋಶಿಯವರಷ್ಟು ಕಚೇರಿ ನೀಡಿದವರಿಲ್ಲ, ಗಾಯನ ಮುದ್ರಿಕೆಗಳನ್ನು ಹೊರ ತಂದವರಿಲ್ಲ.

ಅಡಿಪಾಯ ಕಿರಾಣಾ ಘರಾಣದ್ದು, ಗಾಯನಸೌಧ ಭೀಮಸೇನರ ಸ್ವಂತದ್ದು. ಹಲವು ಅನ್ಯ ಪ್ರಭಾವಗಳನ್ನು ಪ್ರತಿಭೆಯ ಮೂಸೆಯಲ್ಲಿ ಹದಗೊಳಿಸಿ ಅನನ್ಯ ಶೈಲಿ ರೂಪಿಸಿಕೊಂಡ ಅಗ್ಗಳಿಕೆ. ಸ್ವರಪ್ರಧಾನ ಕಿರಾಣಾ ಗಾಯನಕ್ಕೆ ಬಗೆಬಗೆಯ ಲಯಗಳನ್ನು ತನಗಳನ್ನು ಕಸಿಕಟ್ಟಿ ಸಮೀಚೀನ ಶೈಲಿಯ ಸೃಷ್ಟಿ. ಸಾಂಪ್ರದಾಯಿಕತೆಗೆ ಪ್ರಯೋಗಶೀಲತೆಯ ಬೆಸುಗೆ.

ಭೀಮಸೇನರದು ಬಹುಶ್ರುತ ಪ್ರತಿಭೆ. ಖ್ಯಾಲ, ಠುಮರಿ, ದಾಸವಾಣಿ, ಅಭಂಗ, ನಾಟ್ಯ ಗೀತೆ, ಬೇಂದ್ರ ಮತ್ತು ಕುವೆಂಪು ಅವರ ಭಾವಗೀತೆಗಳು ಎಲ್ಲದರಲ್ಲೂ ಎತ್ತಿದ ಕೈ. ೧೯೪೩ರಷ್ಟು ಪೂರ್ವದಲ್ಲಿಯೇ “ಹೀಜ್ ಮಾಸ್ಟರ್ಸ್ ವಾಯ್ಸ್” ಕಂಪನಿಯಿಂದ ಧ್ವನಿಮುದ್ರಣ, ಕೀರ್ತಿಯ ಪ್ರತಿಧ್ವನಿ. ಚಲನಚಿತ್ರದ ಹಿನ್ನೆಲೆ ಗಾಯನ, ಅಲ್ಲಿಯೂ ದಿಗ್ವಿಜಯ.

ಮೇಘಸದೃಶ ಗಾಯನ, ವರ್ಷಾಧಾರೆಯಂಥ ತಾನಗಳಿಂದಾಗಿ ಅವರ ಗಾಯನಕ್ಕೆ “ಭೀಮಸೇನೀಯ” ಮುದ್ರೆಯಿದೆ. ಕರ್ನಾಟಕದ ಈ ಭೀಮಸೇನೀಯ ಕಂಠ ಭಾರತದ ದಿಕ್ಕುಗಳಲ್ಲಿ ಮೊಳಗಿ, ಲೋಕದ ಅಂಚನ್ನು ಮುಟ್ಟಿದುದು ಇಂದು ಇತಿಹಾಸ. ನಮ್ಮ ದೇಶದ ಅನೇಕ ರಾಜ್ಯಗಳಷ್ಟೇ ಅಲ್ಲ, ಡಚ್, ಕೆನಡಾ ದೇಶಗಳೂ ಇವರ ಸಾಕ್ಷ್ಯಚಿತ್ರ ನಿರ್ಮಿಸಿದುದು ಕರ್ನಾಟಕಕ್ಕೆ ದೊಡ್ಡ ಅಭಿಮಾನ.

ಭೀಮಸೇನ ಜೋಶಿಯವರಿಗೆ ಅಪಾರ ಪ್ರಶಸ್ತಿ ಪದವಿಗಳು ಒದಗಿಬಂದಿವೆ. ಇವುಗಳಿಗೆ ಕಳಸವಿಟ್ಟಂತೆ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಸಂಗೀತ ಕ್ಷೇತ್ರದ ಈ ಮೇರು ವ್ಯಕ್ತಿತ್ವವನ್ನು “ನಾಡೋಜ” ಪದವಿ ನೀಡಿ ಗೌರವಿಸಿದೆ.