ನುಡಿಹಬ್ಬ ೫ – ೧೫ನೇ ಫೆಬ್ರವರಿ ೧೯೯೭
ನಾಡೋಜರ ಪರಿಚಯ
೧. ಡಾ.ಕೆ. ಶಿವರಾಮ ಕಾರಂತ
ಸಾಹಿತ್ಯದ ಹಲವು ಪ್ರಕಾರಗಳನ್ನು ಸಮರ್ಥವಾಗಿ ದುಡಿಸಿಕೊಂಡು ಅದರಲ್ಲಿ ತನ್ನ ವಿಶಿಷ್ಟ ಚಾಪನ್ನು ಮೂಡಿಸಿದ ಅಪರೂಪದ ವ್ಯಕ್ತಿ ಡಾ.ಶಿವರಾಮ ಕಾರಂತ. ಕಾದಂಬರಿ, ಹರಟೆ, ಕಥೆ, ಕವಿತೆ, ಗೀತನಾಟಕ, ಪ್ರವಾಸ ಸಾಹಿತ್ಯ, ಶಿಶು ಸಾಹಿತ್ಯ, ವಿಜ್ಞಾನ ಸಾಹಿತ್ಯ, ಸಂಶೋಧನ ಸಾಹಿತ್ಯ, ಎಲ್ಲದರಲ್ಲೂ ಇವರದು ಹಿರಿಯ ಸಾಧನೆ. ಅವರು ಬರಿಯ ಸಾಹಿತಿಯಷ್ಟೇ ಅಲ್ಲ ಚಿತ್ರಕಾರ, ನಟ, ನಿರ್ದೇಶಕ ಹಾಗೂ ಪರಿಸರ ಪ್ರೇಮಿ.
ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಕೋಟದಲ್ಲಿ ೧೯೦೨ ಅಕ್ಟೋಬರ್ ೧೦ ರಂದು ಹುಟ್ಟಿದರು. ೧೯೨೦ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯನ್ನು ಬೆಂಬಲಿಸಿ, ಓದಿಗೆ ವಿರಾಮ ಹೇಳಿದರು. ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾಗಿ ಊರೂರು ತಿರುಗಿ ದಟ್ಟವಾದ ಲೋಕಾನುಭವ ಗಳಿಸಿಕೊಂಡರು. ವಿಧವಾ ವಿವಾಹ, ಪಾನನಿರೋಧ, ಚರಕಾ ಪ್ರಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
೧೯೨೫ರಲ್ಲಿ ಪತ್ರಿಕಾ ಪ್ರಪಂಚಕ್ಕೆ ಧುಮುಕಿ ವಸಂತ ಎಂಬ ಮಾಸ ಪತ್ರಿಕೆಯನ್ನು ಹೊರಡಿಸಿದರು. ಅದನ್ನು ಅಚ್ಚುಕಟ್ಟಾಗಿ ಐದು ವರ್ಷ ನಡೆಸಿದರು. ಅವರ ಮೊದಲ ಕಾದಂಬರಿ ‘ವಿಚಿತ್ರ ಕೂಟ’ ಈ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯಿತು. ೧೯೫೦ರಲ್ಲಿ ವಿಚಾರವಾಣಿ ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ವೈಚಾರಿಕತೆಯಿಂದ ಆರಂಭವಾದ ಅವರ ಬರವಣಿಗೆ ಮುಂದೆ ಸೃಜನಶೀಲತೆಯತ್ತ ತಿರುಗಿತು. ಸಣ್ಣಕತೆ, ಕಾದಂಬರಿ, ನಾಟಕ, ಹರಟೆ, ವಿಡಂಬನೆ, ಪ್ರಬಂಧ ಸಾಹಿತ್ಯ, ಮಕ್ಕಳ ವಿಶ್ವಕೋಶ, ವಿಶ್ವಕೋಶ ವಿಚಾರ ಸಾಹಿತ್ಯ, ಶಿಶು ಸಾಹಿತ್ಯ, ಪ್ರವಾಸ ಸಾಹಿತ್ಯ, ಆತ್ಮಕಥೆ, ತತ್ವಚಿಂತನೆ ಹಾಗೂ ರಾಜಕೀಯ ಬರವಣಿಗೆಗಳು ಚಿತ್ರ,ವಾಸ್ತು, ಶಿಲ್ಪ,ನೃತ್ಯ ಯಕ್ಷಗಾನ ಜಾನಪದ, ಪಠ್ಯಪುಸ್ತಕಗಳು, ಬಾಷಾಂತರ ಅರ್ಥಕೋಶ, ವಿಜ್ಞಾನ ಪರಿಸರ, ಸಂಬಂಧಿ ಗ್ರಂಥಗಳು ಹೀಗೆ ಎಲ್ಲ ಜ್ಞಾನಶಾಖೆಗಳ ಮೇಲೆ ಗ್ರಂಥಗಳನ್ನು, ಬಿಡಿ ಬರಹಗಳನ್ನೂ ರಚಿಸಿದ್ದಾರೆ.
ಕಾರಂತರು ಬಹುಮುಖ ಪ್ರತಿಭೆಯ ಅಸಾಮಾನ್ಯ ವ್ಯಕ್ತಿ. ಅವರು ಕಾದಂಬರಿಕಾರರೆಂದೇ ಹೆಚ್ಚು ಖ್ಯಾತರು. ಮೂವತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳ ಜೀವಕೇಂದ್ರವಿರುವುದು ಬದುಕಿನ ದಟ್ಟ ಅನುಭವದಲ್ಲಿ ಚೋಮನ ದುಡಿ, ಸರಸಮ್ಮನ ಸಮಾಧಿ, ಮರಳಿಮಣ್ಣಿಗೆ, ಬೆಟ್ಟದಜೀವ, ಅಳಿದ ಮೇಲೆ, ಮೂಕಜ್ಜಿಯ ಕನಸುಗಳು, ನಂಬಿವನ ನಾಕನರಕ, ಕುಡಿಯರ ಕೂಸು, ಮೈಮನಗಳ ಸುಳಿಯಲ್ಲಿ ಅವರ ಮಹತ್ವದ ಕಾದಂಬರಿಗಳಲ್ಲಿ ಕೆಲವು. ಅವರ ಕಾದಂಬರಿಗಳು ಬದುಕಿನ ವಿಧಿ ನಿಷೇಧ, ಮೌಲ್ಯ ಪ್ರತಿಪಾದನೆಗಳಿಗಾಗಿ ದುಡಿಯದೆ ಪಾತ್ರಗಳ ನಡೆವಳಿಕೆಗಳ ಮೂಲಕ ಬದುಕಿನ ಕಪ್ಪು, ಬಿಳುಪುಗಳನ್ನು ಚಿತ್ರಸುತ್ತಾ ಹೋಗುತ್ತದೆ. ಬದುಕು ಮತ್ತು ಪ್ರಕೃತಿಯ ಮೇಲಿನ ಅವರ ಅಗಾಧಪ್ರೀತಿ ಪಡೆದ ಅನುಭವವನ್ನು ಮುಲಾಜಿಲ್ಲದೆ ಹೇಳುವ ಎದೆಗಾರಿಕೆ ಅವರ ಬರವಣಿಗೆಯ ವೈಶಿಷ್ಟ್ಯ.
ಕನ್ನಡದಲ್ಲಿ ಗೀತನಾಟಕಗಳನ್ನು ಬರೆದವರಲ್ಲಿ ಕಾರಂತರು ಆದ್ಯರು. ೧೯೩೧ರಲ್ಲಿ ಅವರ ಗೀತನಾಟಕ ಮುಕ್ತದ್ವಾರ ರಚಿತವಾಯಿತು. ಮುಂದೆ ಕಿಸಾಗೋತಮಿ, ಬುದ್ಧೋದಯ, ಯಾರೋ ಅಂದರು ಮುಂತಾದ ಗೀತನಾಟಕಗಳನ್ನು ಬರೆದರು. ನಾಟಕರಂಗ ಅವರ ಒಂದು ಹವ್ಯಾಸ. ಮರಾಠಿ ರಂಗಭೂಮಿಯ ಪ್ರಭಾವದಿಂದಾಗಿ ಆ ಭಾಷೆಯ ನಾಟಕವೊಂದನ್ನು ಅನುವಾದಿಸಿದರು. ಮುಂದೆ ಅನೇಕ ನಾಟಕಗಳನ್ನು ಬರೆದು ನಾಟಕ ಕಂಪನಿ ಜತೆ ಸ್ವಲ್ಪ ಕಾಲ ಸುತ್ತಾಡಿದರು. ತಾವೇ ಬರೆದ ಕತೆಯನ್ನು ಆಧರಿಸಿ ಚಲನಚಿತ್ರ ತೆಗೆದರು. ಬಾಲಕರಿಗಾಗಿ ಶಾಲೆಯ ಪಠ್ಯಕ್ಕೆ ಪೂರಕ ಸಾಹಿತ್ಯ ಒದಗಿಸುವ ದೃಷ್ಟಿಯಿಂದ ಬಾಲಪ್ರಪಂಚ ವಿಶ್ವಕೋಶವನ್ನು ಬರೆದರು. ಪ್ರಬುದ್ಧರಿಗಾಗಿ ವಿಜ್ಞಾನ ಪ್ರಪಂಚ ನಾಲ್ಕು ಸಂಪುಟಗಳಲ್ಲಿ ಬರೆದರು. ಅವರು ಸಂಪಾದಿಸಿದ ಸಿರಿಗನ್ನಡ ಅರ್ಥಕೋಶ ಇಂದಿಗೂ ಮಾಸದ ಒಂದು ನಿಘಂಟು.
ಕಾರಂತರು ಪ್ರಪಂಚದಾದ್ಯಂತ ಸುತ್ತಿದರು. ಅದರ ಫಲವಾಗಿ ಅವರು ಬರೆದ ಅಬೂವಿಂದ ಬರಾಮಕ್ಕೆ, ಅಪೂರ್ವ ಪಶ್ಚಿಮ, ಪಾತಾಳಕ್ಕೆ ಪಯಣ ಇವು ಕನ್ನಡದ ಶ್ರೇಷ್ಠ ಪ್ರವಾಸಕಥನಗಳು. ಹುಚ್ಚುಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ ಕೃತಿಗಳು ಅತ್ಮವೃತ್ತದ ವಿಶಿಷ್ಟ ಮಾದರಿಗಳು. ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆಗಳನ್ನು ನೋಡಿ ಅಧ್ಯಯನ ಮಾಡಿ ಆನಂದಿಸುವುದೂ, ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದೂ ಅವರಿಗೆ ಮೊದಲಿನಿಂದಲೂ ಬಂದ ಪ್ರವೃತ್ತಿ. ಚಾಲುಕ್ಯ ವಾಸ್ತು ಮತ್ತು ಶಿಲ್ಪ, ಕರ್ನಾಟಕದಲ್ಲಿ ಚಿತ್ರಕಲೆ, ಕಲಾ ಪ್ರಪಂಚ ಅವರ ಮಹತ್ವದ ಗ್ರಂಥಗಳು.
ಕರಾವಳಿ ಯಕ್ಷಗಾನಕ್ಕೆ ಕಾಯಕಲ್ಪವನ್ನು ಮಾಡಿ ಅದರ ಆಂತರಿಕ ವಿಕಾಸಕ್ಕೆ ಅನುವು ಮಾಡಿಕೊಟ್ಟರು. ಅವರು ಯಕ್ಷಗಾನ ರಂಗದ ಸಮಗ್ರ ಅಧ್ಯಯನ ನಡೆಸಿ ಯಕ್ಷಗಾನ ಬಯಲಾಟ ಎಂಬ ಗ್ರಂಥವನ್ನು ಬರೆದರು. ಈ ಗ್ರಂಥಕ್ಕೆ ಸ್ವೀಡನ್ ದೇಶದ ಪ್ರಶಸ್ತಿ ಬಂದಿತು; ಮುಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಿಕ್ಕಿತು.
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಸಂಗೀತಾ ಕಲಾ ಅಕಾಡೆಮಿಗಳು. ವಿವಿಧ ವಿಶ್ವವಿದ್ಯಾಲಯಗಳು ಕಾರಂತರಿಗೆ ಪ್ರಶಸ್ತಿ, ಫೆಲೋಶಿಪ್, ಡಾಕ್ಟರೇಟ್ಗಳನ್ನು ನೀಡುವ ಮೂಲಕ ತಮ್ಮ ಗೌರವನ್ನು ಹೆಚ್ಚಿಸಿಕೊಂಡಿವೆ. ಕರ್ನಾಟಕ ರಾಜ್ಯ ಸರ್ಕಾರದ ಪಂಪ ಪ್ರಶಸ್ತಿ ಅವರಿಗೆ ಲಭಿಸಿದೆ. ಭಾರತದ ಅತ್ಯುಚ್ಛ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಬಂದಿದೆ. ದಾದಾಬಾಯಿ ನವರೋಜಿ ಪ್ರಶಸ್ತಿ, ಕ್ಯಾಂಬೆಲ್ ಸ್ಮಾರಕ ಬಂಗಾರದ ಪದಕ ಮುಂತಾದ ಗೌರವಗಳು ಕಾರಂತರಿಗೆ ಸಂದಿವೆ.
ಹೀಗೆ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿಸಿ, ಶ್ರೀಮಂತಗೊಳಿಸಿದ ಡಾ. ಕೋಟ ಶಿವರಾಮ ಕಾರಂತ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಮನ್ನಣೆಯನ್ನು ನೀಡಿದೆ.
೨. ಶ್ರೀ ಎಸ್.ಕೆ. ಕರೀಂಖಾನ್ ಅವರು
ಸ್ವಾತಂತ್ರ್ಯ ಯೋಧರಾಗಿ, ಏಕೀಕರಣ ಚಳುವಳಿಯ ನೇತರರಾಗಿ, ಜನಪದ ಸಂಸ್ಕೃತಿ ಹರಿಕಾರರಾಗಿ ಕರ್ನಾಟಕಕ್ಕೆಲ್ಲ ಒಬ್ಬ ಮಾನವತಾವಾದಿಯಾಗಿ ಶ್ರೀ ಎಸ್.ಕೆ. ಕರೀಂಖಾನ್ ಅವರ ಹೆಸರು ಸುಪರಿಚಿತ.
ಶ್ರೀ ಕರೀಂಖಾನ್ ಹುಟ್ಟಿ ಬೆಳೆದದ್ದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ. ತಂದೆ ಅಬ್ದುಲ್ ರೆಹಮಾನ್ ಖಾನ್ ಆಫ್ಘನ್ ದೇಶದಲ್ಲಿ ಯೋಧರಾಗಿದ್ದವರು. ಮನೆ ಮನಸ್ಸು ಮುರಿದು ಅವರ ಹಿರಿಯರು ಕರ್ನಾಟಕಕ್ಕೆ ವಲಸೆ ಬಂದರು. ಶಾಲೆ ಓದು ಎಂಟನೆಯ ತರಗತಿವರೆಗೆ ಮಾತ್ರ. ಮನೆಯಲ್ಲಿ ಕಲಿತ ಭಾಷೆ ಉರ್ದು. ಕನ್ನಡ ಸಂಸ್ಕೃತ ಶಾಲೆಯಲ್ಲಿ ಕಲಿತ ಭಾಷೆಗಳು. ಬಾಲ್ಯದಲ್ಲೇ ಪ್ರಾಚೀನ ಸಂಸ್ಕೃತ ಕಾವ್ಯ ಪುರಾಣಗಳನ್ನು ಓದಿ ಸವಿದಿದ್ದರು. ಆದರೆ, ಅವರ ಮನಸ್ಸು ತುಡಿದಿದ್ದು ಜನಪದ ಸಂಸ್ಕೃತಿಯೆಡೆಗೆ. ಜನಪದ ಗೀತೆಗಳನ್ನು ಜನರ ಬಾಯಿಯಿಂದಲೇ ಸಂಗ್ರಹಿಸಿದರು. ಸಿರಿಕಂಠದ ಕರೀಂಖಾನ್ ಆ ಹಾಡುಗಳನ್ನು ನಾಡಿನ ಉದ್ದಗಲಕ್ಕೆ ಅಲೆದು ಆ ಹಾಡುಗಳ ಸವಿಯನ್ನು ಮತ್ತೆ ಅವರಿಗೇ ಹಂಚಿದರು. ಆ ಕಾಲದಲ್ಲಿ ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಸ್ವಾತಂತ್ರ್ಯ ಆಂದೋಲನ ನಡೆಯುತ್ತಿತ್ತು. ಶ್ರೀ ಕರೀಂಕಾನ್ ಅವರ ನೆಲದ ಪ್ರೀತಿ ಅವರನ್ನು ಸ್ವಾತಂತ್ರ್ಯ ಚಳುವಳಿಯತ್ತ ಧುಮುಕುವಂತೆ ಮಾಡಿತು. ಜನಪದ ಗೀತೆಗಳನ್ನು ಹಾಡುತ್ತಾ ಊರೂರು ಸಂಚರಿಸುತ್ತಾ ಜನರಲ್ಲಿ ನಾಡಿನ ಬಿಡುಗಡೆಯ ಬಗ್ಗೆ ಜಾಗೃತಿ ಮೂಡಿಸಿದರು. ಫಲವಾಗಿ ಕೆಲವು ವರ್ಷಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿದರು.
ಸ್ವಾತಂತ್ರ್ಯ ಬಂದ ಮುಂದಿನ ದಿನಗಳಲ್ಲಿ ಮಾನಸಿಕವಾಗಿ ಹಾಗೂ ಭೌಗೋಳಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿಸುವ ಏಕೀಕರಣ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ನಾಡಿನ ಮೂಲೆಮೂಲೆಗಳಲ್ಲಿ ಸಂಚರಿಸಿದರು. ತಮ್ಮ ವಿಚಾರಪೂರಿತ ಮಾತುಗಳಿಂದ, ಸುಶ್ರಾವ್ಯ ಹಾಡುಗಳಿಂದ ಜನರಲ್ಲಿ ಕನ್ನಡತನವನ್ನು ಮೂಡಿಸುವುದರಲ್ಲಿ ಸಫಲರಾದರು. ಏಕೀಕರಣದ ಸಂದರ್ಭದಲ್ಲಿ ಅವರು ಮತ್ತೆ ಸೆರೆಮನೆ ಸವಿ ಕಂಡರು. ಆದರೇನಂತೆ, ಕರೀಂಖಾನ್ರ ಬಯಕೆ ಈಡೇರಿತು. ವಿಶಾಲ ಕರ್ನಾಟಕ ಒಂದಾಯಿತು.
ನಾಡುನುಡಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಕರೀಂಖಾನ್ ತಮ್ಮ ಬದುಕಿನ ಬಗೆಗೆ ಯೋಚಿಸಲೇ ಇಲ್ಲ. ವಿಶಾಲ ಕರ್ನಾಟಕದ ಜನಸಮುದಾಯವೇ ತಮ್ಮ ಕುಟುಂಬ ಎಂದು ತಿಳಿದರು. ಎಲ್ಲರೊಳಗೊಂದಾಗಿ ಬೆರೆತರು. ಆದರೂ ಬಡತನ ಅವರನ್ನು ಬೆನ್ನು ಹತ್ತಿತ್ತು. ಈ ಹಂತದಲ್ಲಿ ಅವರು ಕರ್ನಾಟಕ ಬಿಟ್ಟು ಮದರಾಸಿಗೆ ತೆರಳಿದರು. ಸಾಹಿತ್ಯ ಸಂಗೀತಗಳ ಬಗ್ಗೆ ಆಳವಾದ ತಿಳವಳಿಕೆ ಇದ್ದ ಕರೀಂಖಾನ್ ಚಲನಚಿತ್ರಗಳಿಗೆ ಕಥೆ ಸಂಭಾಷಣೆ ಬರೆದು ಜೀವನ ಮಾಡತೊಡಗಿದರು. ಅಲ್ಲೂ ಅವರ ಪಾಲಿಗೆ ಸೌಖ್ಯದ ದಿನಗಳು ಒದಗಿಲಿಲ್ಲ. ಶೋಷಣೆಯ ಬದುಕನ್ನು ನಡೆಸುತ್ತಿದ್ದ ಕರೀಂಖಾನ್ ರೋಸೆದ್ದು ಮತ್ತೆ ಬೆಂಗಳೂರು ಕಡೆ ಬಂದರು. ಅಷ್ಟರಲ್ಲಿ ಕರ್ನಾಟಕ ಸರ್ಕಾರ ಅವರನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರನ್ನಾಗಿ ನೇಮಕಗೊಂಡ ಕರೀಂಖಾನ್ ಅವರು ವಿದ್ವಾಂಸರೆಲ್ಲಾ ಬೆರುಗುಗೊಳಿಸುವಂತ ಕಾರ್ಯಗಳನ್ನು ಮಾಡಿ ತೋರಿದರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ವಿನೂತನ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಿದರು.
ಕಾದಂಬರಿ ಹಾಗೂ ಅನೇಕ ವೈಚಾರಿಕ ಬರಹಗಳನ್ನು ಬರೆದ ಕರೀಂಖಾನ್ರ ಪ್ರೀತಿಯ ಕೆಲಸ ಜನಪದ ಸಾಹಿತ್ಯದ ಸಂಗ್ರಹ ಹಾಗೂ ಆ ಮೂಲಕ ನೆಲದ ಸಂಸ್ಕೃತಿಯನ್ನು ಮತ್ತೆ ಜನರಿಗೆ ತಲುಪಿಸುವುದು. ಗುಲ್ಬರ್ಗಾ ವಿಶ್ವವಿದ್ಯಾಲಯ ತನ್ನ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿದೆ. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಕರ್ನಾಟಕ ಸರಕಾರವು ಜಾನಪದ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಜಾನಪದಶ್ರೀಯನ್ನು ಮೊತ್ತ ಮೊದಲ ಬಾರಿಗೆ ಇವರಿಗೇ ನೀಡಿರುವುದು ಹೆಮ್ಮೆಯ ಸಂಗತಿ.
ನಾಡಿನ ಸಂಸ್ಕೃತಿಯ ವಾರಸುದಾರ ಜಾನಪದ ಜಂಗಮ ಶ್ರೀ ಕರೀಂಖಾನ್ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ.